Sidlaghatta : ಐದು ತಲೆಮಾರನ್ನು ಕಂಡಿರುವ ಶತಾಯುಷಿ ಭಕ್ತರಹಳ್ಳಿ ನಾರಾಯಣಮ್ಮ ಅವರು ಬುಧವಾರ ಬೆಳಗ್ಗೆ ನಿಧನರಾದರು. ಇದರಿಂದಾಗಿ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಇತಿಹಾಸ ಹೇಳುತ್ತಿದ್ದ ಕೊನೆಯ ಕೊಂಡಿ ಕಳಚಿದಂತಾಗಿದೆ.
ಭಕ್ತರಹಳ್ಳಿಯ ಸಂತೇಪಾರ್ ನಾರಾಯಣಪ್ಪ ಅವರ ಪತ್ನಿ ಭಕ್ತರಹಳ್ಳಿ ನಾರಾಯಣಮ್ಮ ಅವರು ಜನಿಸಿದ್ದು 1920 ರ ಸುಮಾರಿನಲ್ಲಿ. ಮೇಲೂರಿನ ಬಳಿಯ ಕಡಿಶೀಗೇನಹಳ್ಳಿಯವರಾದ ಆಕೆ 18 ನೇ ವಯಸ್ಸಿಗೆ ಭಕ್ತರಹಳ್ಳಿಯ ಸಂತೇಪಾರ್ ನಾರಾಯಣಪ್ಪ ಅವರನ್ನು ವಿವಾಹವಾಗಿ ಭಕ್ತರಹಳ್ಳಿಗೆ ಬಂದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಸರಾದ ಭಕ್ತರಹಳ್ಳಿಯಲ್ಲಿ ಹಿರಿಯರಾದ ಬಂಡಿ ನಾರಾಯಣಪ್ಪನವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ರೂಪಿಸಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವಾಗುತ್ತಾ, ಹಲವರಿಗೆ ಆಶ್ರಯ, ಊಟ ನೀಡುತ್ತಿದ್ದ ನಾರಾಯಣಮ್ಮ ಅವರ ನೆನಪಿನಲ್ಲಿ ಆಗಿನ ಹೋರಾಟದ ದಿನಗಳ ಘಟನೆಗಳ ವಿವರಗಳು ಹಸಿರಾಗಿದ್ದವು.
9 ಮಕ್ಕಳು, 20 ಮೊಮ್ಮಕ್ಕಳು, 35 ಮರಿ ಮಕ್ಕಳು, 10 ಮರಿಮರಿ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಭಕ್ತರಹಳ್ಳಿಯಲ್ಲಿ ನಡೆಯಿತು. ಶಾಸಕ ಬಿ.ಎನ್.ರವಿಕುಮಾರ್, ತೋಟಗಾರಿಕಾ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ. ಹಿತ್ತಲಮನಿ, ಎಚ್.ಎಂ.ಕೆ.ಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕಾಳಪ್ಪ ಅಂತ್ಯ ಸಂಸ್ಕಾರದಲ್ಲಿ ಹಾಜರಿದ್ದರು.