Sidlaghatta : ಒಕ್ಕಲಿಗ ಸಮುದಾಯದ ಬಗ್ಗೆ ಸಾಹಿತಿ ಕೆ.ಎಸ್. ಭಗವಾನ್ ಅವರು ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಅವರು ಸಮುದಾಯದ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಿಡ್ಲಘಟ್ಟ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಆಗ್ರಹಿಸಿದರು.
ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಟೋಲ್‌ಗೇಟ್ ಬಳಿ ಇರುವ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರೊ.ಭಗವಾನ್ ಅವರ ಹೇಳಿಕೆ ವಿರುದ್ದ ಖಂಡನಾ ನಿರ್ಣಯ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಒಕ್ಕಲಿಗರ ಸಮುದಾಯದವರೇ. ನಾಡನ್ನು ಕಟ್ಟಿದವರಲ್ಲಿ ಒಕ್ಕಲಿಗರ ಪಾತ್ರ ಪ್ರಮುಖವಾಗಿದೆ. ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರವಾದಿ ಕೆ.ಎಸ್.ಭಗವಾನ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದರು.
ಭಗವಾನ್ ತಮ್ಮ ಹೇಳಿಕೆಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ತಳುಕು ಹಾಕಿದ್ದಾರೆ. ಆ ಮೂಲಕ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯದವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಛಾಫು ಮೂಡಿಸಿದ್ದಾರೆ. ಪ್ರತಿ ರಂಗದಲ್ಲೂ ಒಕ್ಕಲಿಗ ಸಮುದಾಯದವರು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂದರು.
ಪ್ರೊ.ಭಗವಾನ್ ಅವರು ಈ ಹಿಂದೆಯೂ ಹಲವು ಭಾರಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತ, ಜಾತಿ ಧರ್ಮಗಳ ನಡುವೆ ಸಾಮರಸ್ಯ ಕದಡುವಂತ ಹೇಳಿಕೆಗಳನ್ನು ನೀಡಿ ಶಾಂತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅವರು ಉದ್ದೇಶಪೂರ್ವಕವಾಗಿಯೆ ಹಿಂದು ಸಮಾಜ, ಒಕ್ಕಲಿಗ ಸಮುದಾಯದ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ, ಸಂಸ್ಕೃತಿ ಆಚಾರ ವಿಚಾರಗಳನ್ನು ಹೀಯಾಳಿಸುವಂತ ಮನೋಭಾವನೆಯನ್ನು ಬೆಳೆಸಿಕೊಂಡಿದ್ದಾರೆ.
ಅವರ ಹಿರಿತನ ಅನುಭವ ಸ್ಥಾನಮಾನಕ್ಕೆ ತಕ್ಕ ನಡುವಳಿಕೆ ಇದಲ್ಲ. ಉದ್ದೇಶಪೂರ್ವಕವಾಗಿಯೆ ಅವರು ಒಕ್ಕಲುತನ ಕಾಯಕವನ್ನೆ ಅಣಕಿಸಿದ್ದಾರೆ. ಹೀಯಾಳಿಸಿದ್ದಾರೆ. ಅವರ ವಿರುದ್ದ ಕೇಸು ದಾಖಲಿಸಬೇಕು, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಒಕ್ಕಲಿಗರ ಸಂಘದ ಮುಖಂಡರಾದ ಎಸ್.ಪ್ರಕಾಶ್, ಜೆ.ವಿ.ಸುರೇಶ್, ಚಂದ್ರೇಗೌಡ, ಸೊಣ್ಣಪ್ಪರೆಡ್ಡಿ, ಬಿ.ಕೆ.ಚೇತನ್, ಪಿ.ಎಸ್.ಮಂಜುನಾಥ್, ಸಿ.ಎಂ.ಗೋಪಾಲ್, ಹೀರೆಬಲ್ಲ ಕೃಷ್ಣಪ್ಪ, ತಲದುಮ್ಮನಹಳ್ಳಿ ಮಂಜುನಾಥ್, ಆನೂರು ದೇವರಾಜ್, ಕೆಂಪಣ್ಣ, ವೆಂಕಟೇಶ್‌ಮೂರ್ತಿ, ಚಿಕನ್ ವಿಜಿ, ಕೊತ್ತನೂರು ನವೀನ್ ಹಾಜರಿದ್ದರು.