Sidlaghatta : ನಮ್ಮದು ಸಾವಿರಾರು ವರ್ಷಗಳಷ್ಟು ಇತಿಹಾಸವಿರುವ ಸಂಸ್ಕೃತಿ ಆಚಾರ ಹಾಗೂ ವಿಚಾರಗಳೊಂದಿಗೆ ಕೂಡಿದ ಬದುಕು. ನಮ್ಮ ಮಕ್ಕಳಿಗೂ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಅದನ್ನು ಮುಂದುವರೆಸುವಂತಾಗಬೇಕೆಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಡಿ.ಸಿ.ರಾಮಚಂದ್ರ ಅಭಿಪ್ರಾಯಪಟ್ಟರು.
ನಗರದ ದಿಬ್ಬೂರಹಳ್ಳಿ ರಸ್ತೆಯ ಹನುಮಂತಪುರ ಗೇಟ್ ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಿನ ಸ್ಥಿತಿಯಲ್ಲಿ ಬಹುತೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಪಡಿಸುವ ಚಟುವಟಿಕೆಗಳಷ್ಟೆ ನಡೆಯುತ್ತಿವೆ. ನಮ್ಮ ಸಂಸ್ಕೃತಿ ಆಚಾರಗಳನ್ನು ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಡುವ ಕೆಲಸ ಕೂಡ ಆಗಬೇಕಿದೆ ಎಂದು ಹೇಳಿದರು.
ಪ್ರತಿಯೊಂದು ಹಬ್ಬ ಹರಿದಿನ ಆಚರಣೆಯ ಹಿಂದೆ ವೈಜ್ಞಾನಿಕವಾದ ವಿಚಾರವಿದೆ. ಅದನ್ನು ಅರಿತುಕೊಳ್ಳುವ ಮತ್ತು ಆಚರಿಸಿಕೊಂಡು ಹೋಗುವ ಕೆಲಸ ಆಗಬೇಕು, ಅದಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ಸಮುದಾಯದವರು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ತಿಳಿಸಿದರು.
ರೈತರು ಬೆಳೆವ ರಾಗಿ ಸೇರಿದಂತೆ ನಾನಾ ತರಕಾರಿ ದವಸ ದಾನ್ಯಗಳನ್ನು ರಾಶಿ ಮಾಡಿ ಪೂಜಿಸಲಾಯಿತು. ಕೃಷಿ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಎತ್ತಿನ ಬಂಡಿಯನ್ನು ಶಾಲಾ ಆವರಣದಲ್ಲಿ ಸುತ್ತಾಡಿಸಲಾಯಿತು.
ಬಿಜಿಎಸ್ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ವಲಯ ಅರಣ್ಯಾಧಿಕಾರಿ ನವೀನ್, ಬಿಜಿಎಸ್ ಕಾಲೇಜಿನ ಪ್ರಿನ್ಸಿಪಾಲ್ ಕೆ.ಮಹದೇವ್ ಹಾಜರಿದ್ದರು.