Sidlaghatta : ಕೃಷಿ ಪಂಪ್ ಸೆಟ್ ಗಳಿಗೆ ಐದು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಕೊಡುತ್ತಿರುವುದನ್ನು ಹಗಲು ಮತ್ತು ರಾತ್ರಿ ಎರಡು ಪಾಳಿಗಳಲ್ಲಿ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಭು ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈಗಾಗಲೇ ಅಂತರ್ಜಲ ಕುಸಿದಿರುವ ಪರಿಣಾಮ ಬಹುತೇಕ ರೈತರ ಕೊಳವೆಬಾವಿಗಳಿಂದ ಒಂದರಿಂದ ಮೂರು ಗಂಟೆಗಳ ಕಾಲವಷ್ಟೇ ನೀರು ಹೊರತೆಗೆಯಬಹುದಾಗಿದೆ. ನಿರಂತರ ವಿದ್ಯುತ್ ನೀಡುವ ಬದಲಿಗೆ ಎರಡು ಪಾಳಿಗಳಲ್ಲಿ ವಿದ್ಯುತ್ ನೀಡಿದಲ್ಲಿ ರೈತರಿಗೆ ಉಪಕಾರಿಯಾಗುತ್ತದೆ.
ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವುದರಿಂದ ಹುಳು, ಹುಪ್ಪಟೆ, ಹಾವು, ಚೇಳು ಮುಂತಾದ ಸಮಸ್ಯೆಗಳು, ತಾಂತ್ರಿಕ ಸಮಸ್ಯೆಗಳು ತಲೆದೋರಿದರೆ ಅದನ್ನು ಸರಿಪಡಿಸುವ ಮೆಕ್ಯಾನಿಕ್ ಗಳು ರಾತ್ರಿ ವೇಳೆ ಬರುವುದಿಲ್ಲ. ಹಗಲಿನ ಹೊತ್ತು ವಿದ್ಯುತ್ ನೀಡುವಲ್ಲಿ ರಾತ್ರಿ ವೇಳೆ ಕಳ್ಳತನಗಳು ಹೆಚ್ಚಾಗಿವೆ.
ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಮತ್ತು ಅದನ್ನು ಎರಡು ಪಾಳಿಯಲ್ಲಿ ಅರ್ಧರ್ಧ ನೀಡಬೇಕು. ಪಾಲಿ ಹೌಸ್ ಗಳಲ್ಲಿ ಹಗಲಿನಲ್ಲಿ ಶಾಖ ಹೆಚ್ಚಿರುವುದರಿಂದ, ಹಗಲಿನಲ್ಲಿಯೂ ಕೆಲ ಗಂಟೆಗಳು ವಿದ್ಯುತ್ ಅಗತ್ಯವಿದೆ ಎಂದು ಅವರು ವಿವರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಶ್ವತ್ಥ್, ಮುನಿನಂಜಪ್ಪ, ಕೆಂಪಣ್ಣ, ದೇವರಾಜ್, ಮುನೇಗೌಡ, ಬಸಪ್ಪ, ಕೃಷ್ಣಪ್ಪ ಹಾಜರಿದ್ದರು.