Belluti, sidlaghatta : ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸ ನಾಗರಿಕರು ಸೇರಿದಂತೆ ಜನಪ್ರತಿನಿಧಿಗಳಿಂದ ಆಗಬೇಕಿದೆ ಎಂದು ಗ್ರಾ.ಪಂ ಸದಸ್ಯ ಬೆಳ್ಳೂಟಿ ಸಂತೋಷ್ ಹೇಳಿದರು.
ತಾಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಬೆಳ್ಳೂಟಿ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳು ನಮ್ಮ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆಯಲ್ಲದೆ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ಜತೆಗೆ ಊರು ದೇಶ ಎನ್ನುವ ಅಭಿಮಾನವನ್ನೂ ಹೆಚ್ಚಿಸುತ್ತದೆ. ಯುವಕರು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನೂ ಸಹ ಸಮಾನತೆಯಿಂದ ಸ್ವೀಕರಿಸಬೇಕು ಎಂದರು.
ಪ್ರತಿವರ್ಷ ಸಂಕ್ರಾಂತಿ ಹಬ್ಬದ ಅಂಗವಾಗಿ ಗ್ರಾಮದ ಯುವಕರೆಲ್ಲಾ ಸೇರಿ ವಾಲೀಬಾಲ್ ಆಡುವುದು ಇಲ್ಲಿನ ಸಂಪ್ರದಾಯವಾಗಿದ್ದು ಗ್ರಾಮದ ಯುವಕರೆಲ್ಲಾ ಸೇರಿ ಮೂರು ವಾಲೀಬಾಲ್ ತಂಡಗಳನ್ನು ರಚಿಸಿಕೊಂಡು ಗ್ರಾಮದ ಹೆಸರಿನಲ್ಲಿ ಪಂದ್ಯಾವಳಿ ಹಮ್ಮಿಕೊಂಡಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಗ್ರಾಮದ ಮೂರು ತಂಡಗಳು ಭಾಗವಹಿಸಿದ್ದು, ಮೊದಲ ಸ್ಥಾನ ಟೈಗರ್ ತಂಡ, ಎರಡನೇ ಸ್ಥಾನ ಚೀತಾ ತಂಡ ಹಾಗು ಮೂರನೇ ಸ್ಥಾನ ಲಯನ್ ತಂಡ ಪಡೆದುಕೊಂಡವು.
ಮೊದಲನೇ ಸ್ಥಾನ ಪಡೆದ ಟೈಗರ್ ತಂಡಕ್ಕೆ ಅಪ್ಪು ಟ್ರೋಪಿಯೊಂದಿಗೆ 10,000 ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ಚೀತಾ ತಂಡಕ್ಕೆ ಟ್ರೋಪಿಯೊಂದಿಗೆ 7,000 ನಗದು ಬಹುಮಾನ, ತೃತೀಯ ಲಯನ್ ತಂಡಕ್ಕೆ ಟ್ರೋಪಿಯೊಂದಿಗೆ ನಾಲ್ಕು ಸಾವಿರ ನಗದು ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳೂಟಿ ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಶ್ರೀನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ವಿಜಯ್‌ಕುಮಾರ್, ನರಸಿಂಹಮೂರ್ತಿ ಸೇರಿದಂತೆ ಬೆಳ್ಳೂಟಿ ಗ್ರಾಮಸ್ಥರು ಹಾಜರಿದ್ದರು.