Belluti, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ಸದಸ್ಯ, ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ, ಪರಿಸರಪ್ರೇಮಿ ಬೆಳ್ಳೂಟಿ ಸಂತೋಷ್(45) ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳ್ಳೂಟಿ ಗ್ರಾಮದ ನಾರಾಯಣಸ್ವಾಮಿ ಮತ್ತು ಪ್ರಮೀಳಮ್ಮ ದಂಪತಿಯ ಮೂರನೆಯ ಮಗ ಸಂತೋಷ್, ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಗ್ರಾಮೀಣಾಭಿವೃದ್ಧಿ :
ಬೆಳ್ಳೂಟಿ ಗ್ರಾಮದಲ್ಲಿ ಹಸಿರು ಕ್ರಾಂತಿಯನ್ನೇ ನಡೆಸಿದ್ದರು ಸಂತೋಷ್. ಗ್ರಾಮದ ಕೆರೆ ಕುಂಟೆಗಳ ಸಂರಕ್ಷಣೆ, ಮಳೆ ಕೊಯ್ಲು, ರಸ್ತೆ ಬದಿ, ಖಾಲಿ ಜಾಗಗಳಲ್ಲೆಲ್ಲಾ ನಳನಳಿಸುವ ಗಿಡ ಮರಗಳು, ಸ್ಮಶಾನಕ್ಕೆ ಸುಂದರ ರೂಪ ನೀಡಿ ಗಿಡಮರಗಳು ಬೆಳೆಸಿ ಶಾಂತಿಧಾಮವನ್ನಾಗಿಸಿದ್ದು, ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಿಂತ ಸುಂದರವಾಗಿ ರೂಪಿಸಿದ್ದು, ಗ್ರಾಮೀಣಾಭಿವೃದ್ಧಿಯ ಹಿಂದೆ ಸಂತೋಷ್ ಅವರ ಪರಿಶ್ರಮ ಅಪಾರವಾಗಿತ್ತು. ಗ್ರಾಮದ ಸುತ್ತಲಿನ ಎತ್ತರದ ಪ್ರದೇಶದಿಂದ ಬೀಳುವ ಮಳೆನೀರನ್ನು ಕೆರೆ, ಕುಂಟೆ ಮತ್ತು ಕಲ್ಯಾಣಿಗೆ ಹರಿಸಲು ಯೋಜನೆ ರೂಪಿಸಿದ್ದರು. ಅತಿ ಹೆಚ್ಚು ನರೇಗಾ ಅನುದಾನವನ್ನು ಅವರ ಗ್ರಾಮಕ್ಕೆ ಬಳಸಿದ ಹೆಗ್ಗಳಿಗೆ ಸಂತೋಷ್ ಅವರದ್ದು.
ಕೆರೆಯ ನಡುವೆ ಕಾಡು :
ಬೆಳ್ಳೂಟಿ ಕೆರೆಯ ನಡುಮಧ್ಯೆ ಸುಮಾರು ಆರೂವರೆ ಎಕರೆ ಬಂಡ್(ದ್ವೀಪ) ನಿರ್ಮಿಸಿ, ಅದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದ್ದರು ಸಂತೋಷ್. ಐದು ವರ್ಷಗಳು ಗಿಡಗಳನ್ನು ಕಾಪಾಡಿಕೊಂಡು, ಅಲ್ಲೊಂದು ಕಾಡನ್ನೇ ಸೃಷ್ಟಿಸಬೇಕು, ಜೀವಜಗತ್ತಿನ ಆಗರವಾಗಿಸಬೇಕು ಮತ್ತು ಕೆರೆ ತುಂಬಿರುವಾಗ ದೋಣಿ ವಿಹಾರವನ್ನು ಜನರಿಗೆ ಕಲ್ಪಿಸಬೇಕೆಂಬ ಕನಸನ್ನು ಕಂಡಿದ್ದರು.
ಪರಿಸರ ಯಜ್ಞ :
2014 ರಿಂದ ಆನೂರು ಗ್ರಾಮ ಪಂಚಾಯಿತಿಯ ಮೂಲಕ, ಸದಸ್ಯರಾದ ಸಂತೋಷ್, ಇತರರನ್ನು ಜೊತೆಗೂಡಿಸಿಕೊಂಡು, ಒಂದು ಯಜ್ಞದ ಹಾಗೆ ಪ್ರಾಮಾಣಿಕವಾಗಿ ಗಿಡ ನೆಟ್ಟು ಪೋಷಿಸುತ್ತಾ ಬಂದಿದ್ದರು. ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಜಾಗಗಳನ್ನು ಗುರುತಿಸಿ, ನರೇಗಾ ಯೋಜನೆ ಬಳಸಿಕೊಂಡು, ಮಳೆ ಬಿದ್ದೊಡನೆಯೇ ಗಿಡ ನೆಡುವ ಕೆಲಸ ಮಾಡುತ್ತಿದ್ದರು. ತಾಲ್ಲೂಕಿನಲ್ಲಿ ಎಲ್ಲಿಯೇ ಗಿಡ ನೆಡುವ ಕಾರ್ಯಕ್ರಮವಿದ್ದರೂ ಗಿಡಗಳನ್ನು ಖುಷಿಯಿಂದ ಕಳುಹಿಸಿಕೊಡುತ್ತಿದ್ದರು.

ಅಂತಿಮ ದರ್ಶನ :
ಸಚಿವರಾದ ಡಾ.ಸುಧಾಕರ್, ಕೃಷ್ಣ ಭೈರೇಗೌಡ, ಶಾಸಕರಾದ ಬಿ.ಎನ್.ರವಿಕುಮಾರ್, ಪ್ರದೀಪ್ ಈಶ್ವರ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಶಾಸಕರಾದ ವಿ.ಮುನಿಯಪ್ಪ, ಎಂ.ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಪುಟ್ಟು ಆಂಜಿನಪ್ಪ, ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಶಶಿಧರ್ ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಆನಂದ್ ಗೌಡ ಅಂತಿಮದರ್ಶನವನ್ನು ಪಡೆದರು.