Belluti, Sidlaghatta : ಪ್ರಕೃತಿಯಿಂದ ಎಲ್ಲವನ್ನು ವರದಾನವಾಗಿ ಪಡೆದ ಮಾನವ, ಗಿಡ-ಮರ, ನೀರು-ಗಾಳಿ, ಮಣ್ಣು ಎಲ್ಲವನ್ನು ಇಂದು ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುತ್ತ ಆಧುನೀಕರಣದ ತೇರನ್ನು ಏರಿ ಹೊರಟಿದ್ದಾನೆ. ಪರಿಸರವನ್ನು ಉಳಿಸುವುದು ಮತ್ತು ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಪರಿಸರ ಪ್ರೇಮಿ, ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಕೆರೆಯ ನಡುಮಧ್ಯೆ ಇರುವ ಸುಮಾರು ಆರೂವರೆ ಎಕರೆ ಬಂಡ್(ದ್ವೀಪ) ನಲ್ಲಿ ಸುಮಾರು ಒಂದೂಕಾಲು ಸಾವಿರ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿ ಅವರು ಮಾತನಾಡಿದರು.
ಪರಿಸರ ದಿನಾಚರಣೆಯು ನಮ್ಮ ಜೀವನದ ಬಹು ದೊಡ್ಡ ಹಬ್ಬ. ಧಾವಂತದ ಬದುಕಿನಲ್ಲಿ ನಾವು ಅತ್ಯಮೂಲ್ಯ ಪರಿಸರವನ್ನು ಮರೆಯಬಾರದು. ಸುಮಾರು 2014 ರಿಂದ ಆನೂರು ಗ್ರಾಮ ಪಂಚಾಯಿತಿಯಲ್ಲಿ ನಾವು ಒಂದು ಯಜ್ಞದ ಹಾಗೆ ಪ್ರಾಮಾಣಿಕವಾಗಿ ಗಿಡ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಜಾಗಗಳನ್ನು ಗುರುತಿಸಿ, ನರೇಗಾ ಯೋಜನೆ ಬಳಸಿಕೊಂಡು, ಮಳೆ ಬಿದ್ದೊಡನೆಯೇ ಗಿಡ ನೆಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಎಫ್.ಇ.ಎಸ್ ಸಂಸ್ಥೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ನೇಹಿತರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ನೆರವು ಸಿಗುತ್ತಿದೆ. 2021 ರಲ್ಲಿ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಬೆಳ್ಳೂಟಿ ಕೆರೆಯ ಮಧ್ಯೆ 6.5 ಎಕರೆ ಬಂಡ್ ನಿರ್ಮಿಸಲಾಯಿತು. ಅದರಲ್ಲಿ ಪ್ರತಿ ವರ್ಷವೂ ಗಿಡ ನೆಡುತ್ತಾ ಬಂದಿದ್ದೇವೆ. ಈ ಬಾರಿ ಸುಮಾರು 1200 ಗಿಡಗಳನ್ನು ನೆಟ್ಟು, ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದೇವೆ. ಇವನ್ನು ಐದು ವರ್ಷ ಕಾಪಾಡುತ್ತೇವೆ. ಸಣ್ಣ ಕಾಡನ್ನು ಇಲ್ಲಿ ಮಾಡುವ ಕನಸು ನಮ್ಮದು ಎಂದರು.
ಆಲ, ಅರಳಿ, ಅತ್ತಿ, ಬೇವು, ಹಲಸು, ಗಸಗಸೆ ಮುಂತಾದ ಪಕ್ಷಿ, ಕೀಟಗಳಿಗೆ ಪ್ರಿಯವಾದ ಹಣ್ಣಿನ ಮರಗಳನ್ನೇ ನೆಡುತ್ತಿದ್ದೇವೆ. ಇವುಗಳೊಂದಿಗೆ ಸುಂದರ ಹೂ ಬಿಡುವ ಟಬೂಬುಯಾ ಜಾತಿಯ ಮರಗಳು, ಗುಲ್ ಮೊಹರ್, ಜಕರಂಡಾ ಮುಂತಾದ ಅಲಂಕಾರಿಕ ಮತ್ತು ಮಕರಂಡ ಹೀರುವ ಕೀಟ ಮತ್ತು ಪಕ್ಷಿಗಳಿಗೆ ಪ್ರಿಯವಾದ ಸುಮಾರು 200 ಗಿಡಗಳನ್ನು ಕೆರೆ ದಂಡೆಯಲ್ಲಿ ನೆಡುತ್ತಿದ್ದೇವೆ. ಈ ತಿಂಗಳು ಪೂರಾ ಗ್ರಾಮ ಪಂಚಾಯಿತಿ ವತಿಯಿಂದ ಹಲವು ಸರ್ಕಾರಿ ಜಾಗಗಳು ಹಾಗೂ ಡಿಪೋ ಜಾಗದಲ್ಲಿ ಗಿಡಗಳನ್ನು ನೆಡುತ್ತೇವೆ ಎಂದು ಹೇಳಿದರು.
ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆ(ಎಫ್ಇಎಸ್)ಯ ಯೋಜನಾ ವ್ಯವಸ್ಥಾಪಕ ಎನ್. ರಮೇಶ್, ಹಿತ್ತಲಹಳ್ಳಿ ಸುರೇಶ್, ಮುನಿರಾಜು ಹಾಜರಿದ್ದರು.