ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕೃಷಿ ಕಾರ್ಯನುಭವ ಚಟವಟಿಕೆ ಅಡಿಯಲ್ಲಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಜಿಕೆವಿಕೆ ಕೃಷಿ ಪದವಿ ವಿದ್ಯಾರ್ಥಿಗಳಿಗೆ ಜೇನು ಸಾಕಾಣಿಕೆಯ ಬಗ್ಗೆ ಜೇನು ಕೃಷಿ ವಿಭಾಗದ ಸಹಪ್ರಾಧ್ಯಾಪಕಿ ಡಾ.ಬಿ.ವಿ.ಶ್ವೇತ ವಿವರಿಸಿದರು.
ಜೇನುಕೃಷಿ, ಸಮಗ್ರ ಕೃಷಿ ಪದ್ಧತಿಯ ಭಾಗವಾಗಿದೆ. ಅನೇಕ ರೈತರು ತೋಟಗಳಲ್ಲಿ ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕಣೆ ಮಾಡುತ್ತಾರೆ. ಕೆಲವರು ಜೇನುಕೃಷಿಯನ್ನು ಉಪಕಸುಬಾಗಿ ಮಾಡಿಕೊಂಡಿದ್ದಾರೆ. ಜೇನುಹುಳುಗಳಲ್ಲಿ ಮುಖ್ಯವಾಗಿ 5 ಪ್ರಬೇಧಗಳಿವೆ. ಅವುಗಳೆಂದರೆ, ತುಡುವೆಜೇನು, ಕಡ್ಡಿಜೇನು, ಹೆಜ್ಜೆನು, ವಿದೇಶಿ/ಯೂರೋಪಿಯನ್ ಜೇನು, ನುಸುರಿಜೇನು. ಇವುಗಳಲ್ಲಿ ಹೆಜ್ಜೇನು, ಕಡ್ಡಿಜೇನು ಸಾಕಲು ಯೋಗ್ಯವಲ್ಲ. ಉಳಿದ ಮೂರು ಪ್ರಬೇಧದ ಜೇನುಗಳನ್ನು ಸಾಕಬಹುದು ಎಂದು ಅವರು ತಿಳಿಸಿದರು.
ಎಲ್ಲ ಜೇನುಹುಳುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಸಾಕುತ್ತಾರೆ. ಆದರೆ, ತುಡುವೆಜೇನನ್ನು ಹಾಗೆ ಮಾಡಲಾಗುವುದಿಲ್ಲ. ಏಕೆಂದರೆ, ಆ ಜೇನುಹುಳುಗಳು ಹುತ್ತದಲ್ಲೇ ಗೂಡುಕಟ್ಟುತ್ತವೆ. ಆದರೆ, ತುಡುವೆ ಜೇನುಹುಳುಗಳನ್ನೂ ಹುತ್ತದಿಂದ ತೆಗೆದು ಪೆಟ್ಟಿಗೆಗಳಿಗೆ ವರ್ಗಾಯಿಸಿ ಸಾಕಣೆ ಮಾಡಬಹುದು. ನಿಸರ್ಗದಲ್ಲಿ ಸ್ವಚ್ಛಂದವಾಗಿ ಕಟ್ಟಿರುವ ಜೇನುಗೂಡನ್ನು ಅಲುಗಾಡಿಸಿ, ಅಲ್ಲಿಂದ ಹುಳುಗಳನ್ನು ತಂದು ಪೆಟ್ಟಿಗೆಗೆ ಸ್ಥಳಾಂತರಿಸುವುದು ಬಹಳ ನಾಜೂಕಾದ ಕೆಲಸ. ಇದಕ್ಕೆ ನೈಪುಣ್ಯ ಬೇಕು. ಹಾಗೆ ವರ್ಗಾಯಿಸಬೇಕೆಂದರೆ, ಹತ್ತರಿಂದ ಹನ್ನೊಂದು ಉಪಕರಣಗಳು ಬೇಕು. ಜೇನು ವರ್ಗಾವಣೆಗೆ ಬೇಕಾಗುವ ಉಪಕರಣಗಳು ಹೀಗಿವೆ; ಗುದ್ದಲಿ ಗಡಾರಿ ಸಲಿಕೆ, ಚಾಕು,ತಟ್ಟೆ, ಜೇನು ಪೆಟ್ಟಿಗೆ ಮತ್ತು ಚೌಕಟ್ಟು, ಬಾಳೆನಾರು, ಹೊಗೆತಿದಿ, ಅಡಿಕೆ ಪಟ್ಟೆ, ಜೇನು ಮುಖಕವಚ, ಕೈ ಕವಚ, ಜೇನು ಹುಳು ಉಡುಪು ಮತ್ತು ರಾಣಿ ಪಂಜರ ಎಂದು ಅವರು ತೋರಿಸಿ ವಿವರಿಸಿದರು.
ಜೇನು ಪೆಟ್ಟಿಗೆಗೆ ಸ್ಥಳಾಂತರಿಸುವಾಗ ಎಚ್ಚರಿಕೆ ಅಗತ್ಯ. ಈ ವೇಳೆ ಜೇನಿಗೆ ಯಾವುದೇ ರೀತಿ ತೊಂದರೆಯಾಗದಂತೆ ವರ್ಗಾಯಿಸಬೇಕು. ಎರಿಗಳನ್ನು ಜೇನಿಗೆ ಯಾವುದೇ ರೀತಿ ತೊಂದರೆ ಯಾಗದಂತೆ ಚಾಕುವಿನಿಂದ ಕತ್ತರಿಸಿ ತಟ್ಟೆಯಲ್ಲಿ ಇಡಬೇಕು. ಈ ರೀತಿ ಎರಿಯನ್ನು ಕತ್ತರಿಸುವಾಗ ನೊಣಗಳು ಹಿಂದೆ ಸರಿಯುತ್ತಿರುತ್ತವೆ. ಕೊನೆಯಲ್ಲಿ ಎಲ್ಲವೂ ಗುಂಪಿನಿಂದ ಹಿಂದೆ ಕುಳಿತಿರುತ್ತವೆ. ರಾಣಿಜೇನನ್ನು ಗುರುತಿಸಿ ಆ ಹುಳುವನ್ನು ಹಿಡಿದು ರಾಣಿಪಂಜರದಲ್ಲಿ ಹಾಕಿ ಜೇನುಪೆಟ್ಟಿಗೆ ಒಳಗೆ ಇಡಬೇಕು. ಆಗ ಎಲ್ಲಾ ಕೆಲಸಗಾರ ನೊಣಗಳು ಜೇನುಪೆಟ್ಟಿಗೆ ಒಳಗೆ ಬರುತ್ತವೆ ಎಂದು ಹೇಳಿದರು.
ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರಿಂದ ಆಗುವ ಉಪಯೋಗಗಳು ಹಾಗೂ ಅದರಿಂದ ಹೇಗೆ ಪರಾಗಸ್ಪರ್ಶ ಹೆಚ್ಚುತ್ತದೆಂದು ತಿಳಿಸಿಕೊಟ್ಟರು.
ಜೇನು ಕೃಷಿ ವಿಭಾಗದ ಪ್ರಯೋಗಾಲಯದ ಸಹಾಯಕ ಸಂತೋಷ್ ಜೇನನ್ನು ಮರದ ಪೊಟರಿಯಿಂದ ಹೀಗೆ ಸೂಕ್ಷ್ಮವಾಗಿ ತೆಗೆದು ಜೇನಿನ ಪೇಟಿಗೆಗೆ ಸ್ಥಳಾಂತರಿಸಬೇಕೆಂದು ತೋರಿಸಿಕೊಟ್ಟರು ಹಾಗೂ ರೈತರೊಂದಿಗೆ ಗುಂಪು ಚರ್ಚೆ ಮಾಡಿ ಜೇನು ಕೃಷಿಯ ಬಗ್ಗೆ ರೈತರಿಗಿದ್ದ ಸಂಶಯಗಳನ್ನು ಬಗೆಹರಿಸಿದರು. ಹೆಚ್ಚಾಗಿ ಜೇನು ಸಾಕಾಣಿಕೆ ಮಾಡಲು ಪ್ರೋತ್ಸಾಹಿಸಿದರು. ಗ್ರಾಮದ ಹಲವಾರು ರೈತರು ಈ ಸಂದರ್ಭದಲ್ಲಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi