ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ಅತ್ಯಂತ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಗೊಂಡಿದೆ. ಕೇವಲ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸುವುದಷ್ಟೇ ಅಲ್ಲದೆ ಮಕ್ಕಳಿಗೆ ತರಬೇತಿ ಕೊಡಿಸಲು ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುವೊಬ್ಬರ ಮನವೊಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುಗಳು ಹೊರಹೊಮ್ಮಲು ವೇದಿಕೆ ಸಜ್ಜುಗೊಂಡಿದೆ.
ಈ ಹಿಂದೆ ನರೇಗಾ ಯೋಜನೆಯಡಿ ಆಟದ ಮೈದಾನದ ಅಭಿವೃದ್ಧಿಗೆ ಹಣ ನೀಡುತ್ತಿರಲಿಲ್ಲ. ಹೊಸದಾಗಿ ಅದನ್ನು ಪರಿಚಯಿಸಲಾಯಿತು. ಈ ಯೋಜನೆಯ ಸದುಪಯೋಗವನ್ನು ಹಲವೆಡೆ ಹಲವು ರೀತಿಯಲ್ಲಿ ಮಾಡಿಕೊಂಡಿರುವರು. ಅಪ್ಪೇಗೌಡನಹಳ್ಳಿಯಲ್ಲಿ “ನಮ್ಮ ಮಕ್ಕಳು ಕಬಡ್ಡಿ, ಕೊಕ್ಕೊ ಮುಂತಾದ ಆಟಗಳ ಜೊತೆ ಬ್ಯಾಸ್ಕೆಟ್ ಬಾಲ್ ಆಟವನ್ನೂ ಕಲಿತು ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಬೇಕು” ಎಂಬ ಆಶಯದೊಂದಿಗೆ ವಿಶಿಷ್ಟವಾಗಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಿದ್ದಾರೆ. ಉದ್ದ ನೂರು ಅಡಿ ಮತ್ತು ಅಗಲ 55 ಅಡಿ ಇರುವ ಈ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಲು ಖರ್ಚಾದ ಹಣ 8 ಲಕ್ಷ ರೂಗಳು.
“ನಮ್ಮ ಶಾಲೆಯ ಆವರಣದಲ್ಲಿ ಬಹುಕಾಲ ಬಾಳಿಕೆ ಬರುವ ಹಾಗೂ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಬೇಕೆಂದು ನಾವು ಹೊಸಕೋಟೆಗೆ ಹೋಗಿ ನೋಡಿಕೊಂಡು ಬಂದೆವು. ಸಂಪೂರ್ಣ ಕಾಂಕ್ರೀಟ್ ನಲ್ಲಿ ಮಾಡಿದ ಕೋರ್ಟ್ ಮೇಲೆ ವಿಜಯ್ ಅವರಿಂದ ಬಣ್ಣವನ್ನು ಬಳಿಸಿದ್ದೇವೆ. ಈ ಹಿಂದೆ ಅವರೇ ನಮ್ಮ ಶಾಲೆಯ ಗೋಡೆಗಳ ಮೇಲೆ ರೈಲು, ಬಸ್ಸು, ಏರೋಪ್ಲೇನು ಮತ್ತು ಹಡಗನ್ನು ಚಿತ್ರಿಸಿದ್ದರು. ಇದಕ್ಕಾಗಿ ಬಳಸಿರುವ ಬಣ್ಣ ಮತ್ತು ಅದನ್ನು ಬಳಿಯಲು ನೀಡಿದ ಹಣವೇ ಸುಮಾರು 90 ಸಾವಿರ ರೂಗಳಷ್ಟಾಗಿದೆ. ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳದೆ ನಾವು ಕೆಲಸ ಮಾಡಿಸಿದ್ದೇವೆ” ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
“ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಿದ್ದಾಗಿದೆ. ಈಗ ನಮ್ಮ ಮಕ್ಕಳಿಗೆ ತರಬೇತಿಯನ್ನು ನೀಡಲು ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಶಿಡ್ಲಘಟ್ಟದ ಮುನಿಕೃಷ್ಣ ಅವರನ್ನು ಮಾತನಾಡಿದ್ದೇವೆ. ಅವರು ವಾರಕ್ಕೆರಡು ಬಾರಿ ಬಂದು ತರಬೇತಿ ನೀಡುವುದಾಗಿ ತಿಳಿಸಿದ್ದಾರೆ” ಎಂದು ಅವರು ಹೇಳಿದರು.
-ಡಿ.ಜಿ.ಮಲ್ಲಿಕಾರ್ಜುನ