Sidlaghatta : ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಮುಸ್ಲೀಮರು ಒಗ್ಗೂಡಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ದುವಾ ನೆರವೇರಿಸಿದರು.
ನಗರದ ಈದ್ಗಾ ಮೈದಾನಕ್ಕೆ ತೆರಳಿ ಶಾಸಕ ಬಿ.ಎನ್.ರವಿಕುಮಾರ್ ಅವರು ಮುಸ್ಲೀಮರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ, “ ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಭಾವ ಮತ್ತು ದೇವರಿಗಾಗಿ ಮಗ ಇಸ್ಮಾಯಿಲ್ ಅನ್ನು ತ್ಯಾಗ ಮಾಡಲು ಸಿದ್ಧರಾಗಿದ್ದ ಅಚಲ ಭಕ್ತಿಯನ್ನು ನೆನಪಿಸುವ ಈ ಪವಿತ್ರ ಹಬ್ಬವಾದ ಬಕ್ರೀದ್ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಈ ಕ್ಷೇತ್ರದ ಸರ್ವ ಜನರಿಗೂ ಭಗವಂತ ಒಳ್ಳೆಯದನ್ನು ಮಾಡಲಿ” ಎಂದು ಹೇಳಿದರು.
ಜಾಮೀಯಾ ಮಸೀದಿಯ ಧರ್ಮಗುರು ಮಾತನಾಡಿ, “ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ” ಎಂದು ತಿಳಿಸಿದರು.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು.