ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದಿಂದ ತಾಲ್ಲೂಕಿನ ಹಲವಾರು ಗ್ರಾಮಗಳಿಂದ ಬಂದ ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿ, ನಂತರ ನಗರದ ತಾಲ್ಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಹಾಗೂ ಡಾ.ಬಾಬು ಜಗಜೀವನ ರಾಂ ರವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು ಅಂಬೇಡ್ಕರ್. ಶೋಷಿತರು, ಕಾರ್ಮಿಕರು, ಮಹಿಳೆಯರ ಉನ್ನತಿಗೆ ಹೋರಾಡಿದ, ಅಸಹಾಯಕರ ಧ್ವನಿಯಾದ, ಸಮಾನತೆಯ ಕನಸು ಕಂಡ, ಎಲ್ಲರ ಬದುಕಿಗೆ ಸ್ಫೂರ್ತಿಯಾದ ಈ ಮಹಾನ್ ನಾಯಕರ ಕೊಡುಗೆಯನ್ನು ಸದಾ ಸ್ಮರಿಸೋಣ ಎಂದರು.
ವಿದೇಶಗಳಿಂದ ಆಹಾರ ಧಾನ್ಯಗಳನ್ನು ರಪ್ತು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟುಹಾಕಿದ ದೇಶದ ಮಾಜಿ ಉಪಪ್ರದಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯಿಂದ ಊಟ ಮಾಡುವಂತಾಗಿದೆ ಎಂದರು.
ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಸಕ್ಫಾಲ್ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ವಿಶ್ವ ಸಂಸ್ಥೆ ವಿಶ್ವದ ಜ್ಞಾನದ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ತಮ್ಮ ಜೀವನ ಪೂರ್ತಿ ಹೊರಾಟ ಮಾಡಿದ ಮಹಾನ್ ವ್ಯಕ್ತಿ ಬಿ.ಆರ್.ಅಂಬೇಡ್ಕರ್ ರವರು ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲ ಗುಣವಾಗಿತ್ತು. ಭಾರತೀಯರ ಸಂಪ್ರದಾಯವೆಂಬ ಅಸಮಾನತೆಯ ಬೆಂಕಿಯಲ್ಲಿ ಅರಳಿದ ಹೂವು, ಡಾ. ಬಿ.ಆರ್.ಅಂಬೇಡ್ಕರ್. ಅಂಬೇಡ್ಕರ್ ಬದುಕು ಬರಹ ಓದಿದರೆ ಯುವಕರು ಉತ್ತಮ ಪ್ರಜೆಗಳಾಗಲು ಸಾಧ್ಯವಿದೆ. ಜಗತ್ತು ಮೆಚ್ಚಿರುವ, ಸರ್ವರ ಸ್ವಾಸ್ಥ್ಯವನ್ನು ರಕ್ಷಿಸುವ ಗ್ರಂಥ ಸಂವಿಧಾನವನ್ನು ಎಲ್ಲರೂ ಗೌರವಿಸಲೇ ಬೇಕು. ಅಂಬೇಡ್ಕರ್ ರಚಿಸಿರುವ ಸಂವಿಧಾನ ಭಾರತೀಯರೆಲ್ಲರಿಗೂ ತಾಯಿ ಇದ್ದಂತೆ. ಕಾನೂನನ್ನು ಗೌರವಿಸಿದರೆ ಅಂಬೇಡ್ಕರ್ ಅವರನ್ನು ಗೌರವಿಸಿದಂತೆ, ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನವನ್ನು ಓದಿಕೊಳ್ಳಬೇಕು ಎಂದರು.
ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ಅವರ ಭಾವ ಚಿತ್ರಗಳನ್ನು ಹೊತ್ತ ಮುತ್ತಿನ ಪಲಕ್ಕಿಗಳ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ತಮಟೆ ವಾದನ ಜನರನ್ನು ಆಕರ್ಷಿಸಿದವು. ಅಂಬೇಡ್ಕರ್ ಭವನಕ್ಕೆಂದು ಸಮಾಜ ಕಲ್ಯಾಣ ಇಲಾಖೆಗೆ 35 ಕುಂಟೆ ಜಾಗವನ್ನು ಹಸ್ಥಾಂತರ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಇಓ ಬಿ.ಕೆ.ಚಂದ್ರಕಾಂತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ್ಯಾಧಿಕಾರಿ ಎಚ್.ಜಗದೀಶ್, ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ, ನಗರಸಭೆ ಸದಸ್ಯರಾದ ಕೃಷ್ಣಮೂರ್ತಿ, ವೆಂಕಟಸ್ವಾಮಿ, ಅನಿಲ್‌ಕುಮಾರ್, ಶಿವಮ್ಮ ಮುನಿರಾಜು, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ, ದಲಿತ ಮುಖಂಡರು ಹಾಜರಿದ್ದರು.