ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಆಟೋ ನಿಲ್ದಾಣದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಯನ್ನು ಆಟೋ ಚಾಲಕರೊಂದಿಗೆ ಆಚರಿಸಿ, ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಿಸಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಾತನಾಡಿದರು.
ಈಗಿನ ಪೆಟ್ರೋಲ್ ಮತ್ತು ಗ್ಯಾಸ್ ದರದ ಏರಿಕೆಯ ನಡುವೆಯೂ ಆಟೋಚಾಲಕರು ನಗರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಗಮ ಸಂಚಾರಕ್ಕೆ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಯೇ ಚಾಲನೆ ಮಾಡಬೇಕು. ಆಟೋ ಚಾಲಕರು ಜೀವ ವಿಮೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನಗರಸಭಾ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಗುರುತಿನ ಚೀಟಿಯನ್ನು ಚಾಲಕರ ಆಸನದ ಹಿಂಭಾಗ ಅಂಟಿಸಬೇಕು. ಚೀಟಿಯಲ್ಲಿ ಚಾಲಕನ ಹೆಸರು, ಲೈಸೆನ್ಸ್ ನಂಬರ್, ದೂರವಾಣಿ ಸಂಖ್ಯೆ, ವಿಳಾಸ ಇರುತ್ತದೆ. ಕಾನೂನು ಪಾಲಿಸುವ ಮೂಲಕ ಆಟೋ ಚಾಲಕರು ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಲಾಯಿತು. ಬಂಕ್ ಮಂಜುನಾಥ್ ಅವರು ಆಟೋ ಚಾಲಕರು ಮತ್ತು ಕುಟುಂಬದವರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಜೆಡಿಎಸ್ ಮುಖಂಡ ರಮೇಶ್, ಕಂದಾಯ ನಿರೀಕ್ಷಕ ಲತೀಕ್ ಅಹಮದ್, ಕರ್ನಾಟಕ ಜನಾಂದೋಲನ ಸಂಘದ ಗೋವಿಂದರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷ ಅಪ್ಪು, ಆಟೋ ಚಾಲಕರಾದ ಗುರುಮೂರ್ತಿ, ನರಸಿಂಹ, ಹರೀಶ್, ವೆಂಕಟೇಶ್, ಶಿವು, ಬಾಲರಾಜು ಹಾಜರಿದ್ದರು.