ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಟಲ್ ಭೂಜಲ ಯೋಜನೆಯ ಪ್ರಥಮ ಗ್ರಾಮ ಸಭೆ ಮತ್ತು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಸೇರಿದಂತೆ ಸಮರ್ಪಕ ನೀರಿನ ಸರಬರಾಜು ಹಾಗೂ ಲಸಿಕೆ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ. ಪ್ಲಾಸ್ಟಿಕ್‌ನಿಂದ ತಯಾರು ಮಾಡಿದ ಪೇಪರ್, ಬಾಟಲ್ ಮತ್ತು ಗ್ಲಾಸ್ ಬಳಕೆ ಸಂಪೂರ್ಣವಾಗಿ ಹೋಟೆಲ್ ಗಳಲ್ಲಿ ಮತ್ತು ಸಾರ್ವಜನಿಕರು ನಿಲ್ಲಿಸಿದ್ದೇ ಆದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತಷ್ಟು ಸ್ವಚ್ಚತೆ ಕಾಪಾಡುವುದು ಸೇರಿದಂತೆ ಜನರಿಗೆ ರೋಗ ರುಜಿನಗಳು ಬಾರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ನರೇಗಾ ಯೋಜನೆಯಡಿ ಕಾಮಗಾರಿಗಳು ಸಮರೋಪಾದಿಯಾಗಿ ನಡೆಯುತ್ತಿದ್ದು ವಿವಿಧ ವಲಯದಲ್ಲಿ ಇನ್ನು ಹೆಚ್ಚಿಗೆ ಕೆಲಸ ಮಾಡುವುದರೊಂದಿಗೆ ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತಷ್ಟು ಕಾರ್ಯೋನ್ಮುಕರಾಗಬೇಕು ಎಂದು ಮನವಿ ಮಾಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯನ್ನು ಹೆಚ್ಚು ಜನರಿಗೆ ಹಾಕಿಸಿರುವುದರಿಂದ ರಾಜ್ಯ ಮಟ್ಟದಲ್ಲಿ ನಮ್ಮ ಮೇಲೂರು ಪಂಚಾಯತಿಯನ್ನು ಗುರ್ತಿಸಿದ್ದು ಈ ಕುರಿತು ಸಾಕ್ಷ್ಯ ಚಿತ್ರವನ್ನು ಸರ್ಕಾರ ತಯಾರಿಸುತ್ತಿದೆ ಎಂದರು.
ಮಹಿಳಾ ಮತ್ತು ಪರಿಸರ ಅಭಿವೃದ್ದಿ ಸಂಸ್ಥೆಯ ಬಿ.ಮುನಿರಾಜು ಮಾತನಾಡಿ, ಗ್ರಾಮಪಂಚಾಯಿತಿ ಸದಸ್ಯರ ಹಾಗೂ ಸ್ವಸಹಾಯ ಸಂಘಗಳನ್ನು ಸೇರಿಸಿಕೊಂಡು ಸಮಿತಿ ರಚಿಸಿ ಚೆಕ್ ಡ್ಯಾಂ, ಕೃಷಿಹೊಂಡಗಳನ್ನು ನಿರ್ಮಿಸುವುದರ ಮೂಲಕ ಈ ಭಾಗದಲ್ಲಿ ಅಂತರ್ಜಲ ವೃದ್ದಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜಲವನ್ನು ಭೂಮಿಯೊಳಗೆ ಇಂಗಿಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು. ಈ ಅವಕಾಶವನ್ನು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿ ಕಾರ್ಯಗತಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ವನಿತಾ ತಿರುಮಲೇಶ್, ಪಿಡಿಓ,ಶಾರದಾ, ಜಂಗಮಕೋಟೆ ಹೋಬಳಿ ತೋಟಗಾರಿಕೆ ಇಲಾಖೆಯ ಶಾಂತಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಶಶಿಕಲಾರಮೇಶ್, ಸವಿತಾಗೋಪಾಲ್, ಶೋಭಾಹರೀಶ್, ಬಾಗ್ಯಲಕ್ಷ್ಮಿ, ಗೀತಾಂಜಲಿ, ಅಂಭಿಕಾ, ಕಮಲಮ್ಮ, ನಾರಾಯಣಸ್ವಾಮಿ, ದೇವರಾಜ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta