Sidlaghatta : ಶಿಡ್ಲಘಟ್ಟ ನಗರದ ಎ.ಆರ್.ಎಂ ಪಿಯು ಕಾಲೇಜಿನ ವಿಜ್ಞಾನ ವಿಭಾಗದ 60 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಮಂಗಳವಾರ ಬೆಂಗಳೂರಿನ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ಬಸ್ಸಿನಲ್ಲಿ ತೆರಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಚಾಲನೆ ನೀಡಿ ಮಾತನಾಡಿ, ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ಶಿಡ್ಲಘಟ್ಟದ ಎ.ಆರ್.ಎಂ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇಂದು ತೆರಳುತ್ತಿರುವುದು ತುಂಬಾ ಹರ್ಷ ತಂದಿದೆ. ಇಸ್ರೋ ಮಾಡಿರುವ ಸಾಧನೆಗಳ ಪ್ರದರ್ಶನವನ್ನು ಕಣ್ಣಾರೆ ನೋಡಿ, ವಿಜ್ಞಾನಿಗಳಿಂದ ಅದರ ಬಗ್ಗೆ ಮಾಹಿತಿಯನ್ನು ಪಡೆಯುವ ಸುಸಂದರ್ಭ ಒದಗಿಬಂದಿದೆ ಎಂದರು .
1969 ರಲ್ಲಿ ಸ್ಥಾಪನೆಯಾದ ಇಸ್ರೋ ಸಂಸ್ಥೆಯು ಆರ್ಯಭಟ ಉಪಗ್ರಹ, ರೋಹಿಣಿ ಉಪಗ್ರಹ, ಇನ್ಸಾಟ್ ಸರಣಿಯ ಉಪಗ್ರಹಗಳು, ಪಿ.ಎಸ್.ಎಲ್.ವಿ ಉಪಗ್ರಹ, ಜಿ.ಎಸ್.ಎಲ್.ವಿ ಉಪಗ್ರಹ, ಮಂಗಳಯಾನ, ಚಂದ್ರಯಾನ ಹಾಗೂ ಆದಿತ್ಯ ಎಲ್.ವನ್ ಮುಂತಾದ ಯಶಸ್ವಿ ಪರೀಕ್ಷೆಗಳನ್ನು ನಡೆಸಿರುವ ಭಾರತೀಯರ ಹೆಮ್ಮೆಯ ಸಂಸ್ಥೆಯಾಗಿದ್ದು, ನಮ್ಮ ವಿಜ್ಞಾನಿಗಳ ಕಾರ್ಯಕ್ಷಮತೆ ಅತ್ಯಂತ ಉತ್ಕೃಷ್ಟವಾದದ್ದು ಎಂದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಜೊತೆಗೆ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಶಾಲಾಕಾಲೇಜು ಹಂತದಲ್ಲಿ ಆಯೋಜನೆ ಮಾಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಹ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ಸಾದನೆ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಇಸ್ರೋ ಸಂಸ್ಥೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ತಮ್ಮ ಅನುಭವವಗಳನ್ನು ಬರೆದು ಕೊಡಬೇಕು. ಅದರಲ್ಲಿ ಅತ್ಯುತ್ತಮ ಮೂರು ಬರಹಕ್ಕೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು ಎಂದರು.
ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕಸಾಪ ಇಸ್ರೋ ವಿಜ್ಞಾನಿಗಳನ್ನು ಕರೆಸಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರಿಂದಾಗಿ ನಮ್ಮ ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿದೆ ಎಂದರು.
ಇಸ್ರೋ ಸಂಸ್ಥೆಗೆ ಭೇಟಿ ನೀಡಲು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಿ ಮಾರ್ಗದರ್ಶನ ಮಾಡಿದ್ದು, ಅವರ ಪ್ರಾಮಾಣಿಕ ಪ್ರಯತ್ನ ನಮಗೆ ಇಂದು ಇಸ್ರೋ ಭೇಟಿಗೆ ಅವಕಾಶ ಕಲ್ಪಿಸಿದೆ ಎಂದರು.
ಶ್ರೀ ಶಾರದಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಕಸಾಪ ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್, ಉಪನ್ಯಾಸಕರಾದ ಸತ್ಯಾನಂದಮ್, ರಾಜಪ್ಪ, ಭಾಸ್ಕರ್, ಕಲ್ಯಾಣ್ ಕುಮಾರ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.