ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರಿನ ಹ್ಯಾಪಿ ವರ್ಲ್ಡ್ ಫೌಂಡೇಶನ್ ವತಿಯಿಂದ 58 ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಹ್ಯಾಪಿ ವರ್ಲ್ಡ್ ಫೌಂಡೇಶನ್ ನ ಎಸ್.ಎಸ್.ಪಿ ಪ್ರಾಜೆಕ್ಟ್ ಮುಖ್ಯಸ್ಥ ಮಂಜುನಾಥ್ ಮಾತನಾಡಿದರು.
ಗಿಡ, ಮರ, ಪಶು, ಪಕ್ಷಿ, ಕ್ರಿಮಿ, ಕೀಟ ಎಲ್ಲವುಗಳೊಡನೆ ಮನುಷ್ಯನೂ ಒಂದು ಭಾಗ. ಇವುಗಳಲ್ಲಿ ಯಾವುದಕ್ಕೆ ತೊಂದರೆಯಾದರೂ ಮಾನವ ಕುಲಕ್ಕೇ ಅಪಾಯ ಎಂಬುದನ್ನು ತಿಳಿಯಬೇಕು ಎಂದು ಅವರು ತಿಳಿಸಿದರು.
ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಪರಿಸರದಲ್ಲಿನ ಸೂಕ್ಷ್ಮ ಹಾಗೂ ಸಕಲ ಜೀವಿಗಳಿಗೂ ಅವಕಾಶ ಮಾಡಿಕೊಡಬೇಕು. ಇರುವುದೊಂದು ಭೂಮಿಯನ್ನು ಸಂರಕ್ಷಿಸಬೇಕು. ಮನುಷ್ಯನಿಗಿಂತ ಅತಿ ಕ್ರೂರ ಪ್ರಾಣಿ ಮತ್ತೊಂದಿಲ್ಲ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಆಧುನಿಕತೆಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದಾನೆ. ಇದರಿಂದ ವಾತಾವರಣ ಏರುಪೇರಾಗುತ್ತಿದೆ. ಕಾಡನ್ನು ನಾಡು ಮಾಡಲು ಹೊರಟರೆ ಬಿಸಿಲ ಹಾಗೂ ಜಾಗತಿಕ ತಾಪಮಾನ ಹೆಚ್ಚುತ್ತದೆ. ಒಜೋನ್ ಪದರ ನಾಶವಾಗುತ್ತದೆ. ಹಸಿರು ಪರಿಸರ ಉಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.
ಮಕ್ಕಳಿಗೆ ತಮ್ಮ ಗುರಿ ಸಾಧಿಸುವ ಬಗ್ಗೆ, ಪೌಷ್ಟಿಕ ಆಹಾರದ ಬಗ್ಗೆ ಮತ್ತು ಗಿಡಗಳನ್ನು ಯಾಕೆ ಬೆಳಸಬೇಕು ಮತ್ತು ಹೇಗೆ ಬೆಳಸಬೇಕು ಅನ್ನುವುದನ್ನು ತಿಳಿಸಿಕೊಟ್ಟು 5,6,7 ನೇ ತರಗತಿ ಮಕ್ಕಳಿಗೆ ಎರಡೆರಡು ಹಣ್ಣಿನ ಗಿಡಗಳನ್ನು ವಿತರಿಸಿ, ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.
ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್ ಪಾಷ, ಸುಜಾತ, ಭಾರತಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಮುನೀಂದ್ರಾ ಹಾಜರಿದ್ದರು.