ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಹಾಗೂ ಪೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದೂರದೃಷ್ಟಿ ಯೋಜನೆ ಅನುಮೋದನೆಯ ಗ್ರಾಮಸಭೆಯಲ್ಲಿ ಯೋಜನಾ ವ್ಯವಸ್ಥಾಪಕ ಎನ್.ರಮೇಶ್ ಮಾತನಾಡಿದರು.
ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮಸಭೆ ಎರಡು ಆಧಾರಸ್ತಂಭಗಳಾಗಿದ್ದು, ಯೋಜನೆ ತಯಾರಿಕಾ ಪ್ರಕ್ರಿಯೆಯಲ್ಲಿ ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯರು, ರೈತರು ಸೇರಿದಂತೆ ದುರ್ಬಲ ವರ್ಗದ ಜನರನ್ನು ಎಲ್ಲಾ ಹಂತಗಳಲ್ಲಿ ತೊಡಗಿಸಿ ಅವರ ಧ್ವನಿಯನ್ನು ಹೆಚ್ಚಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ (ಎಫ್.ಇ.ಎಸ್) ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಹೇಳಿದರು.
ದೂರದೃಷ್ಠಿ ಯೋಜನಾ ಪ್ರಕ್ರಿಯೆಗಳಲ್ಲಿ ಮೌಲ್ಯವರ್ಧನೆಯನ್ನು ಮಾಡಲು ಎಫ್‌ಇಎಸ್ ಸಂಸ್ಥೆಯು ಶಿಡ್ಲಘಟ್ಟ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಯಲ್ಲೂ ಸಹಕಾರವನ್ನು ನೀಡುತ್ತಿದ್ದು ಇದುವರೆವಿಗೂ ಆಧ್ಯತೆಯನ್ನು ನೀಡದ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ, ಸಾಮಾಜಿಕ ಭದ್ರತೆ ಯೋಜನೆಗಳ ಹಾಗೂ ಜೀವನೋಪಾಯ ಚಟುವಟಿಕೆಗಳು ಮುಂತಾದವುಗಳಿಗೂ ಒತ್ತನ್ನು ನೀಡಲು ಗ್ರಾಮ ಪಂಚಾಯಿತಿಗಳನ್ನು ಪ್ರೇರೇಪಿಸಲಾಗುತ್ತಿದೆ ಎಂದರು.
ವ್ಯವಸಾಯವನ್ನು ಹೆಚ್ಚು ನಂಬಿಕೊಂಡಿರುವ ನಮ್ಮ ಗ್ರಾಮೀಣ ಭಾಗದ ರೈತರು ಅವೈಜ್ಙಾನಿಕವಾಗಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ಬಳಸಿ ಕೃಷಿಭೂಮಿಯನ್ನು ಬರಡಾಗಿಸುವುದಲ್ಲದೇ, ವ್ಯವಸಾಯದಿಂದ ಲಾಭವಿಲ್ಲವೆಂದು ಕೃಷಿಯಿಂದ ದೂರ ಸರಿಯುತ್ತಿರುವುದು ನಾವು ಗಮನಿಸಬೇಕಾಗಿದೆ. ಕೃಷಿ ಇಲಾಖೆಯ ಜೊತೆಗೂಡಿ ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರಿಗೆ ಪೋತ್ಸಾಹವನ್ನು ನೀಡಿ ಕೃಷಿರಂಗವನ್ನು ಉಳಿಸುವ ಗುರುತರ ಜವಾಬ್ದರಿ ಎಲ್ಲಾ ಗ್ರಾಮ ಪಂಚಾಯಿತಿಗಳ ಮೇಲಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯನಿ ಮಾತನಾಡಿ, ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯನ್ನು ಎಫ್‌ಇಎಸ್ ಸಂಸ್ಥೆಯ ಸಹಕಾರದಿಂದ ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನೆಯನ್ನು ತಯಾರಿಸಿದ್ದು, ಶಿಕ್ಷಣದ ಕ್ಷೇತ್ರಕ್ಕೆ ಅಭಿವೃದ್ಧಿಗೆ ಈ ಯೋಜನೆಯಲ್ಲಿ ಮೊದಲ ಆಧ್ಯತೆಯನ್ನು ನೀಡಲಾಗಿದೆ. ಪ್ರಾರ್ಥಮಿಕ ಶಾಲೆಯ ಮಕ್ಕಳೊಂದಿಗೆ ಗುಣಮಟ್ಟದ ಶಿಕ್ಷಣ, ಮಕ್ಕಳ ಹಾಗೂ ಶಾಲೆಯ ಮೂಲಭೂತ ಸಮಸ್ಯೆಗಳಿಗೆ ಕುರಿತಂತೆ ಕೇಂದ್ರಿಕೃತ ಗುಂಪು ಚರ್ಚೆಗಳನ್ನು ಮಾಡಿ ಸಮಸ್ಯೆಗಳ ಪಟ್ಟಿಯನ್ನು ಮಾಡಿದೆ. ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಶಾಲಾ ಬಿಟ್ಟ ಮಕ್ಕಳ ಸಂಖ್ಯೆ 7 ಇದ್ದು ಕೂಡಲೆ ಅವರನ್ನು ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕೆರೆತರಲಾಗುವುದು. ಮೂರು ಶಾಲಾ ಕೊಠಡಿಗಳು ತುಂಬಾ ಶಿಥಿಲ ವ್ಯವಸ್ಥೆಯಲ್ಲಿ ಇದ್ದು ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಅವುಗಳನ್ನು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸರಿಪಡಿಸಲಾಗುವುದು. ಈಗಿರುವ ಶಾಲಾ ಮಕ್ಕಳ ದಾಖಲಾತಿಗೆ ಅನುಗುಣವಾಗಿ 4 ಶಿಕ್ಷಕರ ಕೊರತೆ ಇದೆ. 4 ಶಾಲೆಗಳ ಅಡುಗೆ ಕೋಣೆ ನಿರ್ಮಾಣವಾಗಬೇಕು. ಶಾಲಾ ಮಕ್ಕಳಿಗೆ ಡೆಸ್ಕ್ ವ್ಯವಸ್ಥೆ ಹಾಗೂ ಆಟದ ಮೈದಾನ ಮತ್ತು ಆಟೋಪಕರಣಗಳ ಬೇಡಿಕೆಯು ಬಂದಿದೆ. ಒಂದು ಶಾಲೆಗೆ ಶುದ್ಧ ನೀರಿನ ವ್ಯವಸ್ಥೆಯಾಗಬೇಕು ಹಾಗೂ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಪ್ರತ್ಯೇಕ ಶೌಚಲಯಗಳ ವ್ಯವಸ್ಥೆಯಾಗಬೇಕು. ಗ್ರಂಥಾಲಯ ವ್ಯವಸ್ಥೆ, ಬೆಳ್ಳೂಟಿ ಶಾಲೆಯ ತರ ಉಳಿದ ಶಾಲೆಗೂ ಸುಣ್ಣ ಬಣ್ಣದ ವ್ಯವಸ್ಥೆಯಾಗಬೇಕು ಎಂಬ ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತವಾಗಿದ್ದು ಬೆಳ್ಳೂಟಿ ಗ್ರಾಮದ ಶಾಲೆಯನ್ನು ಮೇಲ್ದಾರ್ಜೆಗೆ ಏರಿಸಿದಂತೆ ಉಳಿದ 7 ಗ್ರಾಮಗಳ ಶಾಲೆಗಳನ್ನು ಅಭಿವೃದ್ಧಿಪಡಿಸಲಾವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಪಿ.ಎನ್.ವಿಜಯೇಂದ್ರ, ಸದಸ್ಯರಾದ ಪ್ರಕಾಶ್, ಲತಾ ದೇವರಾಜ್, ಅರುಣ್ ಕುಮಾರ್, ವೆಂಕಟೇಶ್, ರತ್ನಮ್ಮ, ಉಷಾರಾಣಿ, ಮುರಳಿ, ಅರುಣ, ವೆಂಕಟಲಕ್ಷಮ್ಮ, ಪ್ರೇಮಾ, ರಾಧ, ನರಸಿಂಹಮೂರ್ತಿ, ಬಿ.ಎನ್.ವಿಶ್ವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧ, ಪಶುಪಾಲನ ಇಲಾಖೆಯ ಡಾ.ಬಿಂದು, ಅಟಲ್ ಭೂಜಲ ಯೋಜನೆಯ ಮೋಹನ್, ಸಾಯಿಬಾಬಾ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಅನಸೂಯಮ್ಮ ಹಾಜರಿದ್ದರು.