Sidlaghatta : ಶಿಡ್ಲಘಟ್ಟ ತಾಲ್ಲುಕಿನ ಆನೂರು ಗ್ರಾಮ ಪಂಚಾಯಿತಿಯ (Anur Grama Panchayat) ಕೆಲವು ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು, ಶಾಲೆ, ಅಂಗನವಾಡಿಗಳನ್ನು ವೀಕ್ಷಿಸಿ, ಮಾಹಿತಿ ಪಡೆದು ಪಂಚಾಯತ್ ರಾಜ್ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಕೆಲಸ ಮಾಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಖಾಸಗಿ ಶಾಲೆಗಳಿಗೆ ಹೋಗದ ಹಾಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರುವಂತೆ ಮಾಡಿದಾಗ ನಮ್ಮ ಯೊಜನೆಗಳು ಫಲಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ಆನೂರು ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಕೆಲಸಗಳು ನಡೆದಿವೆ. ಈ ಗ್ರಾಮ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಿ ಇತರರಿಗೆ ಈ ರೀತಿಯಲ್ಲಿ ಕಾಮಗಾರಿಗಳನ್ನು ಮಾಡಲು ಹೇಳುವಂತೆ ರೂಪಿಸಬೇಕಿದೆ. ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಬೇಕು. ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳೆಲ್ಲ ಸರ್ಕಾರಿ ಶಾಲೆಗೆ ಬರಬೇಕು. ಗ್ರಾಮಗಳಲ್ಲಿರುವ ಪದವೀಧರರನ್ನು ಶಾಲೆಗಳಲ್ಲಿ ವಿವಿಧ ವಿಷಯ ಬೋಧಿಸುವಂತೆ ಪ್ರೇರೇಪಿಸಿ. ಸರ್ಕಾರಿ ಸವಲತ್ತುಗಳು ಹಳ್ಳಿಯ ಜನರಿಗೆ ತಲುಪಬೇಕು ಎಂದು ಹೇಳಿದರು.
ಆನೂರಿನ ಡಿಜಿಟಲ್ ಗ್ರಂಥಾಲಯ, ಅಂಗನವಾಡಿ, ಇಂಗುಗುಂಡಿಗಳನ್ನು ವೀಕ್ಷಿಸಿ, ಬೆಳ್ಳೂಟಿ ಸರ್ಕಾರಿ ಶಾಲೆ ಹಾಗು ಕುಂಟೆ ವೀಕ್ಷಣೆ ಮಾಡಿದರು.
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಶಿಲ್ಪಾಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಓ ಶಿವಶಂಕರ್, ಉಪ ಕಾರ್ಯದರ್ಶಿ ಶಿವಕುಮಾರ್, ಇಓ ಮುನಿರಾಜು, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಒ ಕಾತ್ಯಾಯಿನಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯೇಂದ್ರ, ಸದಸ್ಯ ಸಂತೋಷ್ ಹಾಜರಿದ್ದರು.
ರೈತರ ಮನವಿ
ಗ್ರಾಮಾಂತರ ಪ್ರದೇಶದ ರೈತರು ಇ ಸ್ವತ್ತು ಮಾಡಿಸಲಾಗದೇ ನಾಡ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗೆ ಒಂದು ವರ್ಷದಿಂದ ಅಲೆಯುತ್ತಿದ್ದಾರೆ. ಪ್ರತಿಯೊಂದಕ್ಕೂ ದತ್ತಾಂಶದಲ್ಲಿ ದೃಡೀಕೃತವಾದ ಇ ಸ್ವತ್ತು ಖಾತೆ ಕೇಳುವುದರಿಂದ ಇ ಸ್ವತ್ತು ಖಾತೆ ಮಾಡಿಸಲು ಕ್ರಮ ವಹಿಸಬೇಕು. ಪ್ರತಿಯೊಂದ ಹಳ್ಳಿಯಲ್ಲೂ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಇನ್ನು ಕೆಲವು ಬೇಡಿಕೆಗಳ ಮನವಿಯನ್ನು ರೈತ ಸಂಘದ ಸದಸ್ಯರು ಕೇಂದ್ರದ ತಂಡಕ್ಕೆ ನೀಡಿದರು.