Sidlaghatta : ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಹೊಸ ಮೊಬೈಲ್‌ಗಳನ್ನು ನೀಡಲು ಒತ್ತಾಯಿಸಿ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಾರಿಗೆ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ ದೇಶಾದ್ಯಂತ ಪ್ರತಿಭಟನೆ ನಡೆಸಿ ಕರಾಳ ದಿನ ಆಚರಿಸುತ್ತಿದ್ದೇವೆ ದೇಶ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಮಂತ್ರಿಮಂಡಲದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ದೇಶದ ಜನತೆ ಭಾರೀ ಪ್ರಮಾಣದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.
ಪೋಷನ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು ಆ ಸಂಬಂಧ ಸುಪ್ರೀಂಕೋರ್ಟ್ ಮಾರ್ಗದರ್ಶನ ಪಾಲಿಸಬೇಕು, 2023 ರ ಬಜೆಟ್‌ನಲ್ಲಿ ಹೆಚ್ಚಳವಾದ ೧ ಸಾವಿರ ರೂಗಳ ಗೌರವಧನವನ್ನು ಬಿಡುಗಡೆ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ಐಸಿಡಿಎಸ್ ಯೇತರ ಮತ್ತು ಇತರೆ ಇಲಾಖೆಗಳ ಕೆಲಸಗಳು ಹಚ್ಚಬಾರದು, ಇಲಾಖೆಯ ಮೂಲಕ ವಿತರಿಸಿರುವ ಕಳಪೆಮಟ್ಟದ ಮೊಬೈಲ್ ಫೋನುಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ಕಚೇರಿಯ ಶಿರಸ್ತೆದಾರ ಆಸೀಯಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಿಡಿಪಿಓ ನೌತಾಜ್ ಮಾತನಾಡಿ ಇಲಾಖೆಯ ನಿರ್ದೇಶಕರ ಸೂಚನೆಯಂತೆ ಅಂಗನವಾಡಿ ಕಾರ್ಯಕರ್ತರಿಂದ ಯಾವುದೇ ಕಾರಣಕ್ಕೂ ಮೊಬೈಲ್ ವಾಪಸ್ ಪಡೆಯುವುದಿಲ್ಲ ಬದಲಿಗೆ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳ ಕುರಿತು ಇಲಾಖಾ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡುತ್ತೇವೆ ಹೆಚ್ಚುವರಿಯಾಗಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರ ಮೂಲಕ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಅಶ್ವತಮ್ಮ, ಕಾರ್ಯದರ್ಶಿ ಗುಲ್ಜಾರ್, ಖಜಾಂಚಿ ಉಮಾ, ಸಿಪಿಐಎಂ ಪಕ್ಷದ ನಾಯಕ ಫಯಾಜ್ ಮತ್ತಿತರರು ಉಪಸ್ಥಿತರಿದ್ದರು.