ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲ ವಿಕಾಸ ಸಮಿತಿ ಸಭೆಯಲ್ಲಿ ಸೋಮವಾರದಿಂದ ಅಂಗನವಾಡಿ ಕೇಂದ್ರಗಳು ಆರಂಭವಾಗಲಿದ್ದು ಈ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಂಗನವಾಡಿ ಕಾರ‍್ಯಕರ್ತೆ ಸಿ.ಶೋಭಾ ವೆಂಕಟೇಶ್ ಮಾತನಾಡಿದರು.
ಕೊರೊನಾ ನಿಯಮಗಳನ್ನು ಪಾಲಿಸಬೇಕಾದ ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು ಕನಿಷ್ಟ ಒಂದು ಮೀಟರ್ ಅಂತರದಲ್ಲಿ ಕೂರಿಸುವುದು ಸೇರಿ ಎಲ್ಲ ಅಗತ್ಯ ಕ್ರಮಗಳನ್ನು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗುವುದು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಲ್ಲ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕು, ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕು, ಅದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಸೋಮವಾರದಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರಲಿದ್ದು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತಲ್ಲದೆ ಅಂದು ಹಬ್ಬದ ವಾತಾವರಣ ನಿರ್ಮಿಸಿ ಮಕ್ಕಳನ್ನು ಸ್ವಾಗತಿಸಲು ನಿರ್ಧರಿಸಲಾಯಿತು.
ಮುದ್ದೇನಹಳ್ಳಿಯ ಶ್ರೀಸಾಯಿ ಟ್ರಸ್ಟ್ ನೀಡಿದ ಪೌಷ್ಟಿಕ ಆಹಾರದ ಪುಡಿಯನ್ನು ಸಾಧಾರಣ ಹಾಗೂ ಅಪೌಷ್ಟಿಕ ಮಕ್ಕಳಿಗೆ ವಿತರಿಸಲಾಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸಂಗೀತಮಂಜುನಾಥ್, ಮುಖಂಡರಾದ ಸಿ.ರಾಮಣ್ಣ, ದ್ಯಾವಪ್ಪ, ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಗಂಗರಾಜ್, ರಾಮಕೃಷ್ಣ , ವಿ.ಆರ್.ಸುರೇಶ್‌ಬಾಬು ಹಾಜರಿದ್ದರು.