Sidlaghatta : ಸಂವಿಧಾನವನ್ನು ಬದಲು ಮಾಡುವ ಮಾತನ್ನು ಹೇಳಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟದ ದಲಿತ ಸಂಘರ್ಷ ಸಮಿತಿ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ.ದ.ಸಂ. ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಭಾರತದ ಸಂವಿಧಾನವನ್ನು ಬದಲಾವಣೆ ಮಾಡುವ ಬಗ್ಗೆ ಮಾತನಾಡಿರುವ ದೇಶದ್ರೋಹಿ ಸಂಸದ ಅನಂತ ಕುಮಾರ್ ಹೆಗಡೆಯನ್ನು ಕ.ದ.ಸಂ. ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಧಾರದ ಮೇಲೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವನ್ನು ತಿದ್ದುವ ಬಗ್ಗೆ ಮಾತನಾಡಿರುವುದು ಅವರ ಅವಿವೇಕತನ, ದುರಹಂಕಾರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುವ ಕುತಂತ್ರವಾಗಿರುತ್ತದೆ. ಭಾರತವನ್ನು ಸರ್ವಾಧಿಕಾರಿ ರಾಷ್ಟ್ರವಾಗಿ ಬದಲಾವಣೆ ಮಾಡುವುದು ಕೋಮುವಾದಿ ಪಕ್ಷಗಳ ಷಡ್ಯಂತ್ರವಾಗಿದೆ. ಇದನ್ನು ದೇಶದ ಎಲ್ಲಾ ನಾಗರೀಕರು ಖಂಡಿಸಬೇಕಿದೆ. ದೇಶದಲ್ಲಿ ಸಾಮರಸ್ಯ ಕದಡಿ ಮತೀಯ ಸಂಘರ್ಷಗಳಿಗೆ ಪ್ರೇರಣೆ ಕೊಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮ ವಹಿಸುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತಿದೆ ಎಂದು ಹೇಳಿದರು.
ಕ.ದ.ಸಂ. ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ಮಳ್ಳೂರು ಸೊಣ್ಣಪ್ಪ, ಕೊಂಡಪ್ಪಗಾರಹಳ್ಳಿ ವಿಜಯಕುಮಾರ್, ಕೋಟಗಲ್ ಮೂರ್ತಿ, ದೇವರಾಜ್, ಹಿತ್ತಲಹಳ್ಳಿ ದೇವರಾಜು, ನಾರಾಯಣಸ್ವಾಮಿ, ಆಂಜಿನಪ್ಪ ಹಾಜರಿದ್ದರು.