Sidlaghatta : ಕ್ಯಾರೆಟ್ ಕೀಳಲು ಕೂಲಿಕಾರರನ್ನು ಚಿಕ್ಕಬಳ್ಳಾಪುರದ ಕಡೆಗೆ ಕೊಂಡೊಯ್ಯುತ್ತಿದ್ದ ಸರಕು ಸಾಗಾಣಿಕೆ ವಾಹನ, ಚಾಲಕನ ನಿಯಂತ್ರಣ ತಪ್ಪಿ, ಶಿಡ್ಲಘಟ್ಟ ನಗರದ ಹೊರವಲಯದ ಸೇತುವೆಯ ಕೆಳಗಿ ಉರುಳಿ ಬಿದ್ದಿದ್ದು, ವಾಹನದಲ್ಲಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
ತಾಲ್ಲೂಕಿನ ಅರಿಕೇರೆ ಗ್ರಾಮದಿಂದ ಕೂಲಿಕಾರರನ್ನು ಕರೆದುಕೊಂಡು ಹೊರಟಿದ್ದ ಟೆಂಪೋ ಬುಧವಾರ ಮುಂಜಾನೆ ಶಿಡ್ಲಘಟ್ಟದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಹಂಡಿಗನಾಳ ಸಮೀಪ ಅಮ್ಮನಕೆರೆ ರಾಜಕಾಲುವೆಯ ಸೇತುವೆ ಕೆಳಗೆ ಉರುಳಿ ಬಿದ್ದಿದೆ. ಹಳೆಯ ಮತ್ತು ಹೊಸ ಸೇತುವೆಯ ಮಧ್ಯೆ ವಾಹನ ಸಿಲುಕಿಕೊಂಡಿದ್ದರಿಂದ ಅನಾಹುತ ತಪ್ಪಿದೆ. ವಾಹನ ಮುಗುಚಿ ಬಿದ್ದಿದ್ದರೆ ಭಾರಿ ಅನಾಹುತ ಆಗುತ್ತಿತ್ತು, ಪ್ರಾಣಾಪಾಯ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಾಯುವಿಹಾರಕ್ಕೆ ತೆರಳಿದ್ದ ನಾಗರಿಕರು ಈ ಅಪಘಾತವನ್ನು ಕಂಡೊಡನೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.