ಗುರುತು ಪರಿಚಯವಿಲ್ಲ, ಶಿಡ್ಲಘಟ್ಟ ಎಲ್ಲಿದೆ ಎಂಬುದು ಕೂಡ ತಿಳಿದಿಲ್ಲ, ಆದರೂ ಯಾವುದೇ ಫಲಾಪೇಕ್ಷೆಯಿಲ್ಲದೆಯೇ ದೂರದ ಅಮೆರಿಕದಿಂದ ಶಿಡ್ಲಘಟ್ಟದ ಕೊರೊನಾ ಸೋಂಕಿತರಿಗೆ ಕೆಲವು ದಾನಿಗಳು ನೆರವಿನ ಹಸ್ತವನ್ನು ಇತ್ತಕಡೆಗೆ ಚಾಚಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಸಹಸ್ರ ದೀಪಿಕಾ ಇಂಟರ್ ನ್ಯಾಷನಲ್ ಫಾರ್ ಎಜುಕೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ.ರಾಮಕೃಷ್ಣ ಮತ್ತು ಸಹ ಸಂಸ್ಥಾಪಕಿ ಹಾಗೂ ಖಜಾಂಚಿ ವಿಜಯಾ ಎಲ್.ರಾಮಕೃಷ್ಣ ಅವರುಗಳು ತಮ್ಮ ಸಂಸ್ಥೆಯ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಕೊರೊನ ಸೋಂಕಿತರಿಗೆ ಐದು ಆಮ್ಲಜನಕ ಸಾಂದ್ರಕ ಉಪಕರಣಗಳು ಮತ್ತು 1300 ಜನ ಸೋಂಕಿರರಿಗೆ ಆಗುವಷ್ಟು ಔಷಧಿಗಳನ್ನು ಪ್ಯಾಕೆಟ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
“ಶಿಡ್ಲಘಟ್ಟ ಮತ್ತು ಚಿಂತಾಮಣಿ ನಡುವೆ ಸಿಗುವ ತಿಮ್ಮಸಂದ್ರ ಮೂಲದ ಡಾ.ರಾಜೇಶ್ವರಿ ಎಂಬುವವರು ಈಗ ಯೆಲಹಂಕದಲ್ಲಿದ್ದಾರೆ. ಅವರು ದೂರವಾಣಿ ಮೂಲಕ ಕರೆ ಮಾಡಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ಕೋವಿಡ್ ಸಂದರ್ಭದಲ್ಲಿ ನಮ್ಮ ಪರಿಚಯದವರ ಸಂಸ್ಥೆಯ ಮೂಲಕ ಏನಾದರೂ ಸಹಾಯ ಮಾಡಬೇಕೆಂದಿದ್ದೇವೆ. ಏನಾದರೂ ಅಗತ್ಯವಿದ್ದರೆ ತಿಳಿಸಿ ಎಂದು ಒಂದು ತಿಂಗಳ ಹಿಂದೆ ಕೇಳಿದ್ದರು. ಆಗ ನಾನು ಆಮ್ಲಜನಕ ಸಾಂದ್ರಕ ಉಪಕರಣಗಳನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದ್ದೆ. ತಕ್ಷಣವೇ ಅವರು ಹಾಂಕಾಂಗ್ ದೇಶದ ಕಂಪೆನಿಗೆ ಹಣ ವರ್ಗಾಯಿಸಿ ನಮ್ಮ ವಿಳಾಸಕ್ಕೆ ಆಮ್ಲಜನಕ ಸಾಂದ್ರಕ ಉಪಕರಣಗಳನ್ನು ಬುಕ್ ಮಾಡಿದರು. ಆದರೆ ವಿಮಾನಗಳ ಹಾರಾಟ ನಿಂತಿದ್ದರಿಂದಾಗಿ ತಡವಾಗಿ ಅಂದರೆ ಕಳೆದ ಮಂಗಳವಾರ ಐದು ಆಮ್ಲಜನಕ ಸಾಂದ್ರಕ ಉಪಕರಣಗಳು ನಮಗೆ ತಲುಪಿದವು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
“ಈ ನಡುವೆ ಇನ್ನೂ ಏನಾದರೂ ಅಗತ್ಯವಿದೆಯಾ ಎಂದು ಕೇಳುತ್ತಿದ್ದರು. ಕೋವಿಡ್ ಸೋಂಕಿತರಿಗೆ ನೀಡುವ ಔಷಧಿಗಳ ಪಟ್ಟಿಯನ್ನು ಅವರಿಗೆ ಕೊಟ್ಟೆ. ಸುಮಾರು 1300 ಜನರಿಗೆ ಆಗುವಷ್ಟು ಔಷಧಿಗಳನ್ನು ಪ್ಯಾಕೆಟ್ ಮಾಡಿ ನಮಗೆ ಮೂರು ಕಂತುಗಳಲ್ಲಿ ಕಳುಹಿಸಿಕೊಟ್ಟಿದ್ದಾರೆ. ಔಷಧಿಗಳ ಪ್ಯಾಕೆಟ್ ಮೇಲಾಗಲೀ ಎಲ್ಲೂ ಅವರ ಹೆಸರಾಗಲೀ, ಅವರ ಸಂಸ್ಥೆಯ ಹೆಸರಾಗಲೀ ಇರಲಿಲ್ಲ. ದಾನಿಗಳು ಅಜ್ಞಾತರಾಗಿದ್ದರು. ಅವರ ಬಗ್ಗೆ ವಿಚಾರಿಸಿದೆ. ಆಗ ಡಾ.ರಾಜೇಶ್ವರಿ ಅವರು ಈ ಸೇವಾ ಕಾರ್ಯ ಮಾಡುತ್ತಿರುವವರು ಸಹಸ್ರ ದೀಪಿಕಾ ಇಂಟರ್ ನ್ಯಾಷನಲ್ ಫಾರ್ ಎಜುಕೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ.ರಾಮಕೃಷ್ಣ ಮತ್ತು ಸಹ ಸಂಸ್ಥಾಪಕಿ ಹಾಗೂ ಖಜಾಂಚಿ ವಿಜಯಾ ಎಲ್.ರಾಮಕೃಷ್ಣ ಎಂದು ಹೇಳಿದರು. ನನ್ನನ್ನು ಅವರು ನೋಡಿಲ್ಲ, ಕೇವಲ ದೂರವಾಣಿ ಮೂಲಕ ಪರಿಚಯವಾಗಿ, ಯಾವುದೇ ಫಲಾಪೇಕ್ಷೆಯಿಲ್ಲದೆ ನಮ್ಮ ತಾಲ್ಲೂಕಿನ ಸೋಂಕಿತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಇಂತಹ ಒಳ್ಳೆಯ ಮನಸ್ಸುಗಳ ಸಂಖ್ಯೆ ಹೆಚ್ಚಲಿ” ಎಂದು ಅವರು ಹೇಳಿದರು.
“ಈ ದಾನಿಗಳು ನೀಡಿರುವ ಔಷಧಿಗಳನ್ನೇ ನಮ್ಮ ತಾಲ್ಲೂಕಿನ ಕೋವಿಡ್ ಕೇರ್ ಸೆಂಟರುಗಳಲ್ಲಿರುವ ರೋಗಿಗಳಿಗೆ ನೀಡುತ್ತಿದ್ದೇವೆ. ಇನ್ನೂ ಈ ರೀತಿ ದಾನಿಗಳು ಮುಂದೆ ಬಂದು ನೆರವಾದಲ್ಲಿ ಮನೆಗಳಲ್ಲಿಯೇ ಹೋಂ ಕ್ವಾರಂಟೈನ್ ನಲ್ಲಿ ಇರುವ ಸೋಂಕಿತರಿಗೂ ನೀಡುತ್ತೇವೆ” ಎನ್ನುತ್ತಾರೆ ಡಾ.ವೆಂಕಟೇಶಮೂರ್ತಿ.