ನಗರದ ತೋಟಗಾರಿಕೆ ಇಲಾಖೆ ಆವರಣದ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಉಲ್ಲಂಘನೆ ಮಾಡಿ ಅಲ್ಲಿ ಬೇರೊಂದು ಕಟ್ಟಡ ನಿಮಾಣ ಮಾಡಲು ಮುಂದಾಗಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಶಿಡ್ಲಘಟ್ಟದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಲವಾರು ಹೋರಾಟ ನಡೆಸಲಾಗಿದೆ. ಈ ಬಗ್ಗೆ ಹಲವಾರು ಭಾರಿ ಅಧಿಕಾರಿಗಳ ಸಭೆ ಸಹ ನಡೆದು ವಿಫಲವಾಗಿತ್ತು. ಕಳೆದ ಜನವರಿ 28 ರಂದು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಹಾಗೂ ದಲಿತ ಮುಖಂಡರ ಸಭೆ ನಡೆದಿತ್ತು. ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್ ರಾಜೀವ್‌ರಿಗೆ ಸಂಸದರು ಸೂಚಿಸಿ ಮುಂಬರುವ ದಿನಗಳಲ್ಲಿ ಸ್ಥಳೀಯ ಶಾಸಕರನ್ನೊಳಗೊಂಡಂತೆ ಸಮುದಾಯದ ಮುಖಂಡರ ಸಭೆ ನಡೆಸಿ ಸ್ಥಳ ಮಂಜೂರಾದ ಕೂಡಲೇ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದಿದ್ದರು.
ನಂತರದ ದಿನಗಳಲ್ಲಿ ಈ ಬಗ್ಗೆ ಅಧಿಕಾರಿಗಳು ಯಾವುದೇ ವಿಷಯ ಬಹಿರಂಗಪಡಿಸದೇ ಇರುವುದು ಹಾಗೂ ಇಂದು ಏಕಾಏಕಿ ಸದರಿ ಜಾಗದಲ್ಲಿ ಬೇರೊಂದು ಕಟ್ಟಡ ಕಟ್ಟಲು ಮುಂದಾಗಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿರುವ ಕೋಮುವಾದಿ ಮನಸ್ಥಿತಿಯನ್ನು ಸಾಬೀತು ಪಡಿಸಿದಂತಿದೆ ಎಂದರು.
ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾದ ನಡಾವಳಿಗಳನ್ನೇ ಉಲ್ಲಂಘನೆ ಮಾಡುವುದಾದರೆ ಇಲ್ಲಿ ಕಾನೂನು ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ ಎಂದರು.
ಕೂಡಲೇ ಸಂಸದರ ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾದಂತೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಸ್ಥಳ ಮೀಸಲಿಡುವುದು ಸೇರಿದಂತೆ ಸ್ಥಳದಲ್ಲಿ ಬೇರಾವುದೇ ಕಾಮಗಾರಿ ಮಾಡದಂತೆ ತಡೆಯಬೇಕು. ಸಭೆಯ ನಡಾವಳಿಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜಸ್ವ ನಿರೀಕ್ಷಕ ಅಮರೇಂದ್ರ ಮೂಲಕ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಈಧರೆ ಪ್ರಕಾಶ್, ನಾಗನರಸಿಂಹ, ಗುರುಮೂರ್ತಿ, ಕೃಷ್ಣಪ್ಪ, ರವಿ, ನಾರಾಯಣಸ್ವಾಮಿ, ವಿಜಯಕುಮಾರ್, ವೆಂಕಟೇಶಪ್ಪ, ಗೋವಿಂದಪ್ಪ, ರಾಜ್‌ಕುಮಾರ್, ತಿಮ್ಮರಾಜು ಹಾಜರಿದ್ದರು.