ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿದಂತೆ ಅಧಿಕಾರಿಗಳ ಸಭೆ ನಡೆಸಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್ ರಾಜೀವ್ ಅವರಿಗೆ ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರುವ ನಾಯಕರಲ್ಲ. ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿಯ ಹೆಸರಲ್ಲಿ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ನಗರದ ಹೊರವಲಯದಲ್ಲಿ ಗುರುತಿಸಿರುವ ಜಾಗ ಸರಿಯಿಲ್ಲ ಎಂಬ ಮುಖಂಡರ ಮನವಿಯನ್ನು ಆಲಿಸಿದ ಸಂಸದ ಎಸ್.ಮುನಿಸ್ವಾಮಿ, ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿಯೇ ಭವನ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಈ ಬಗ್ಗೆ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಸ್ಥಳ ಮಂಜೂರು ಮಾಡಿಸಲು ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು.
ಅಗತ್ಯ ಬಿದ್ದಲ್ಲಿ ತೋಟಗಾರಿಕೆ ಇಲಾಖೆಗೆ ಇಲ್ಲಿರುವ ಜಾಗಕ್ಕಿಂತ ದುಪ್ಪಟ್ಟು ಜಾಗವನ್ನು ಬೇರೆಡೆ ನೀಡಲು ಕ್ರಮವಹಿಸಲಾಗುವುದು. ಕಳೆದ 30 ವರ್ಷಗಳಿಂದ ನಗರದ ಹೃದಯಭಾಗದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಂ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿರುವ ಎಲ್ಲಾ ದಲಿತ ಸಂಘಟನೆಗಳ ಒಕ್ಕೊರಲ ಅಭಿಪ್ರಾಯದಂತೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿಯೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನ ನಿರ್ಮಾಣ ಮಾಡುವ ಭರವಸೆಯನ್ನು ಅವರು ನೀಡಿದರು. ಮುಂಬರುವ ದಿನಗಳಲ್ಲಿ ಸ್ಥಳೀಯ ಶಾಸಕರನ್ನೊಳಗೊಂಡಂತೆ ಸಮುದಾಯದ ಮುಖಂಡರ ಸಭೆ ನಡೆಸಿ ಸ್ಥಳ ಮಂಜೂರಾದ ಕೂಡಲೇ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ರಾಜೀವ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ದಲಿತ ಮುಖಂಡರಾದ ಗೊಲ್ಲಹಳ್ಳಿ ಶಿವಪ್ರಸಾದ್, ಮೇಲೂರು ಮಂಜುನಾಥ್, ಎನ್.ವೆಂಕಟೇಶ್, ದಡಂಘಟ್ಟ ತಿರುಮಲೇಶ್, ಎಸ್.ಎಂ.ರಮೇಶ್, ದ್ಯಾವಕೃಷ್ಣಪ್ಪ, ಕೃಷ್ಙಮೂರ್ತಿ, ಗುರುಮೂರ್ತಿ, ಈಧರೆ ಪ್ರಕಾಶ್, ನಾಗನರಸಿಂಹ, ದಾಮೋದರ್, ದೇವರಮಳ್ಳೂರು ಕೃಷ್ಣಪ್ಪ ಹಾಜರಿದ್ದರು.