ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಶಾಸಕ ವಿ. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ತಹಶೀಲ್ದಾರ್ ಅರುಂಧತಿ ಅವರ ಉಪಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಗೆ ಭಾಗವಹಿಸಲು ದಲಿತ ಸಂಘಟನೆಗಳ ಒಕ್ಕೂಟದಿಂದ ಎಲ್ಲಾ ಮುಖಂಡರು ಒಗ್ಗೂಡಿ ಪ್ರವಾಸಿಮಂದಿರದಲ್ಲಿ ಸೇರಿ ಚರ್ಚಿಸಿ ತೋಟಗಾರಿಕೆ ಇಲಾಖೆಯ ಸ್ಥಳದಲ್ಲಿ ಸ್ಥಳ ನಿಗದಿಪಡಿಸಬೇಕೆಂದು ಸಭೆಯಲ್ಲಿ ಮಂಡಿಸಲು ತೀರ್ಮಾನಿಸಿದರು. ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಸದೇ ಶಾಸಕ ವಿ.ಮುನಿಯಪ್ಪ ಅವರು ಪ್ರವಾಸಿ ಮಂದಿರದ ಹೊರಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಈ ಬಗ್ಗೆ ಚರ್ಚಿಸಿದರು.
ಈ ವೇಳೆ ಶಾಸಕ ವಿ.ಮುನಿಯಪ್ಪ ಮಾತನಾಡಿ, ನೀವು ಕೇಳುತ್ತಿರುವ ತೋಟಗಾರಿಕೆಯ ಸ್ಥಳ ನೀಡಲು ಆಗುವುದಿಲ್ಲ. ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳ ಮುಂಭಾಗದಲ್ಲೇ ತೋಟಗಾರಿಕೆ ಇಲಾಖೆ ಇದೆ. ಈಗಾಗಲೆ ಭವನ ನಿರ್ಮಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ. ಆದ್ದರಿಂದ ನಗರದ ಹೊರ ಭಾಗದಲ್ಲಿ ಭವನಕ್ಕೆ ಸೂಚಿಸಲಾದ ಸ್ಥಳದಲ್ಲಿ ನಿರ್ಮಿಸುವ ಮೂಲಕ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಎಲ್ಲರೂ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಜಿಗುಂಟೆ ಮೂರ್ತಿ, “ಡಾ.ಬಿ.ಆರ್. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಎಲ್ಲಾ ರೀತಿಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ. ಊರಿನಿಂದ ದೂರ ನಿರ್ಮಿಸಿದರೆ ಯಾರಿಗೂ ಉಪಯೋಗವಾಗದು. ಆದ್ದರಿಂದ ಭವನ ತೋಟಗಾರಿಕೆಯ ಇಲಾಖೆಯ ಸ್ಥಳದಲ್ಲಿ ಕಟ್ಟಲು ತಾವು ಅನುಮತಿ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆಯಿರಿ. ನಗರದಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನ ಹೊರ ಹಾಕದೆ ನಗರದಲ್ಲೇ ಕಟ್ಟುವಂತ ಕೆಲಸ ಆಗಬೇಕು” ಎಂದು ವಿನಂತಿಸಿದರು.
ಶಾಸಕ ವಿ. ಮುನಿಯಪ್ಪ ಮುಖಂಡರ ಮನವಿಯನ್ನು ಆಲಿಸಿ, “ಈ ದಿನದ ಸಭೆಯನ್ನು ಮುಂದೂಡಲಾಗಿದೆ. ಸಂಸದ ಆರ್. ಮುನಿಸ್ವಾಮಿ ಅವರು ಸಹ ಭಾಗವಹಿಸಲಿ. ಸರ್ಕಾರದಿಂದ ಬಿಡುಗಡೆಯಾದ ಹಣ ಸದುಪಯೋಗ ಮಾಡಿಕೊಂಡು ಡಾ. ಬಿ.ಆರ್.ಅಂಬೇಡ್ಕರ್ ಭವನ ಕಟ್ಟಲು ಸ್ಥಳ ನಿಗದಿ ಮಾಡೋಣ. ಸಂಸದರೊಂದಿಗೆ ಚರ್ಚಿಸಿ ಸಭೆಯ ದಿನಾಂಕವನ್ನು ನಿಗದಿ ಮಾಡುತ್ತೇವೆ” ಎಂದರು.
ತಹಶೀಲ್ದಾರ್ ಅರುಂಧತಿ, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರಠಾಣೆ ಪಿಎಸ್ ಐ ಸತೀಶ್, ಶಿರಸ್ಥೇದಾರ್ ಮಂಜುನಾಥ್, ದಲಿತ ಸಂಘಟನೆಗಳ ಒಕ್ಕೂಟ ಕಾರ್ಯದರ್ಶಿ ಈಧರೆ ಪ್ರಕಾಶ್, ಕೆ.ಎಸ್ ದ್ಯಾವಕೃಷ್ಣಪ್ಪ, ನಾಗನರಸಿಂಹ, ಗೊರಮಡುಗು ನಾರಾಯಣಸ್ವಾಮಿ, ನಡಿಪಿನಾಯಕನಹಳ್ಳಿ ಎನ್.ಎ ವೆಂಕಟೇಶ್, ಜೆ. ವೆಂಕಟಾಪುರ ವಿಜಯಕುಮಾರ್, ತಾತಹಳ್ಳಿ ಚಲಪತಿ, ಭಕ್ತರಹಳ್ಳಿ ಪ್ರತೀಶ್, ದೇವರಮಳ್ಳೂರು ಕೃಷ್ಣಪ್ಪ, ಅರುಣ್ ಕುಮಾರ್, ಮಳ್ಳೂರು ಅಶೋಕ್, ರವಿಶಂಕರ್, ಪ್ರಕಾಶ್, ಮಧು, ಸೊಣ್ಣೇನಹಳ್ಳಿ ವೆಂಕಟೇಶಪ್ಪ, ಪಿಂಡಿಪಾಪನಹಳ್ಳಿ ಮುನಿಆಂಜಿಪ್ಪ, ರಾಮಾಂಜಿಪ್ಪ, ತಾತಹಳ್ಳಿ ಗಂಗಾಧರ್, ಡಿ.ಸಿ.ನರಸಿಂಹಮೂರ್ತಿ, ಬೈರಗಾನಹಳ್ಳಿ ಕಿರಣ್, ಲಕ್ಕೇನಹಳ್ಳಿ ವೆಂಕಟೇಶ್ ಹಾಜರಿದ್ದರು.