ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿ.ಕೆ.ವಿ.ಕೆ ಕೃಷಿ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಬೆಂಗಳೂರು ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ಶ್ರೀನಿವಾಸ್ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 18 ಗ್ರಾಮಗಳಲ್ಲಿ ಕೃಷಿ ಪದವಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿನಿಯರು ಹಾಗೂ ಎಂಟು ಮಂದಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ. ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸ್ಥಿತಿಯನ್ನು ಹಾಗೂ ರೈತರ ಕೃಷಿ ಸಮಸ್ಯೆಗಳನ್ನು ಅರಿಯಲು ಅವಕಾಶ ಮಾಡಿಕೊಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಶಿಬಿರದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ, ಮಣ್ಣು ಪರೀಕ್ಷೆ ಮಹತ್ವ, ವಿವಿಧ ಬೆಳೆಗಳ ಬಗ್ಗೆ ಗುಂಪು ಚರ್ಚೆ ಸಭೆ, ಮೌಲ್ಯ ವರ್ಧಿತ ಪದಾರ್ಥಗಳ ತೈಯಾರಿಕೆ, ಪಶು ಚಿಕಿತ್ಸಾ ಶಿಬಿರ, ಮಾಹಿತಿ ಕೇಂದ್ರ ಸ್ಥಾಪನೆ, ಬೆಳೆಗಳ ಸಂಗ್ರಹಾಲಯ, ಕ್ಷೇತ್ರ ಭೇಟಿ, ರೋಗ ಮತ್ತು ಕೀಟಗಳನ್ನು ಗುರುತಿಸಿ ಸೂಕ್ತ ಪರಿಹಾರ ಕೊಡುವುದು, ಕೃಷಿ ವಸ್ತು ಪ್ರದರ್ಶನ ಆಯೋಜನೆ ಮೊದಲಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯದ ಜೊತೆಗೆ ವಿವಿಧ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿಯಲು ಮತ್ತು ಬಳಕೆ ಮಾಡಲು ಅವಕಾಶ ಒದಗಿಸಲಿದೆ ಎಂದರು.
ವಿಸ್ತರಣಾ ವಿಭಾಗದ ಮಖ್ಯಸ್ಥ ಡಾ.ಬಿ.ಕೃಷ್ಣಮೂರ್ತಿ ಮಾತನಾಡಿ, “ಮಾಡಿಕಲಿ” ಮತ್ತು “ನೋಡಿತಿಳಿ” ತತ್ವದ ಅನ್ವಯ ವಿವಿಧ ಬೆಳೆಗಳ ತಳಿಗಳನ್ನು ಬೆಳೆಯಲು ಅವಕಾಶ ಮಾಡಿಕೊಡಲಾಗಿದ್ದು, ವಿದ್ಯಾರ್ಥಿಗಳು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಯೋಜನೆಗಳು ಮತ್ತು ಅನುಷ್ಠಾನದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ಮಂಜುನಾಥಗೌಡ ರೇಷ್ಮೆ ಹುಳುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕ ಡಾ.ಸಿ.ನಾರಾಯಣಸ್ವಾಮಿ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ.ಮಂಜುನಾಥ್ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗರತ್ನ ಮುನೀಂದ್ರ, ದ್ಯಾವಪ್ಪ, ಮಂಜುಳ ಮುನಿವೆಂಕಟಸ್ವಾಮಿ, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಎಂಪಿಸಿಎಸ್ ಸದಸ್ಯ ಮಧು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮಮತ, ಕಲಾವಿದ ದೇವರಮಳ್ಳೂರು ಮಹೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi