ಶಿಡ್ಲಘಟ್ಟ ತಾಲ್ಲೂಕಿನ ಎದ್ದಲತಿಪ್ಪೇನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅವರ ಜಮೀನಿನಲ್ಲಿ ಕೃಷಿ ಹೊಂಡದಿಂದ ನೀರು ಹಾಯಿಸಲಿಕ್ಕೆ ಇಟ್ಟಿದ್ದ ಮೋಟರ್ ಪಂಪ್ ಮತ್ತು ಕೇಬಲ್ ಅನ್ನು ಬುಧವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ.
ಬೆಳಗ್ಗೆ ನೀರು ಹಾಯಿಸಲೆಂದು ತೋಟಕ್ಕೆ ಹೋದಾಗ ಸುಮಾರು 22 ಸಾವಿರ ಬೆಲೆ ಬಾಳುವ ಈ ಮೋಟರ್ ಪಂಪ್ ಮತ್ತು ಕೇಬಲ್ ಕಳ್ಳತನವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಸುರೇಶ್ ದೂರು ಸಲ್ಲಿಸಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆಯಷ್ಟೇ ಅದೇ ಎದ್ದಲತಿಪ್ಪೇನಹಳ್ಳಿ ಗ್ರಾಮದಲ್ಲಿ ಶಾಂತಮ್ಮ ವೆಂಕಟಪ್ಪ ಅವರ ತೋಟದಲ್ಲಿ ಸುಮಾರು 50 ಸಾವಿರ ರೂ ಬೆಲೆ ಬಾಳುವ ಎರಡು ಸ್ಟಾರ್ಟರ್ ಹಾಗೂ ಕೇಬಲ್ ಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಈ ರೀತಿ ಕಳ್ಳತನ ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.