Sugaturu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ರೈತರಿಗೆ ಚಿಂತಾಮಣಿ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳಿಂದ ಇತಿಹಾಸ ಪ್ರಸಿದ್ಧ ಶ್ರೀ ಬಸವಣ್ಣ ದೇವಾಲಯದ ಆವರಣದಲ್ಲಿ ಗ್ರಾಮೀಣ ಅಧ್ಯಯನ ಮತ್ತು ಮೌಲ್ಯಮಾಪನದಡಿ ಕೃಷಿ, ಬೆಳೆ ಕುರಿತು ಮಾಹಿತಿ ಪಾಠ ನಡೆಯಿತು.
ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಟಿ.ನರೇಶ್ ಮಾತನಾಡಿ, ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳು, ಬೆಳೆ ವಿಧಾನ ಮತ್ತು ಕ್ರಮಗಳು, ವೈಜ್ಞಾನಿಕ ಪದ್ಧತಿಗಳ ಅಳವಡಿಕೆ, ಬೆಳೆನಿರ್ವಹಣೆ ಮತ್ತು ಸಂಗ್ರಹಣೆ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ಅರಿವು ಇರಬೇಕು. ಕೃಷಿಯಿಂದಲೂ ಆರ್ಥಿಕ ಆದಾಯ ಗಳಿಕೆ ಸಾಧ್ಯವಿದೆ ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ರಮ್ಯಶ್ರೀ ಮಾತನಾಡಿ, ಕೃಷಿ ಅಧ್ಯಯನ ವಿದ್ಯಾರ್ಥಿಗಳು ಕಾರ್ಯಾನುಭವದ ಮೂಲಕ ರೈತರಿಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುವ ಮೂಲಕ ರೈತರಲ್ಲಿ ಕೃಷಿ ಕುರಿತು ಮತ್ತಷ್ಟು ವೈಜ್ಞಾನಿಕ ಜಾಗೃತಿ ಮೂಡಿಸಲಿದ್ದು ಅದರ ಪ್ರಯೋಜನವನ್ನು ರೈತರು ಬಳಸಿಕೊಳ್ಳಬೇಕು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಸುಗಟೂರು ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಪ್ರಮುಖವಾಗಿ ರಾಗಿ, ತರಕಾರಿ, ಹೂವು, ಹಣ್ಣು, ರೇಷ್ಮೆ ಬೆಳೆಯನ್ನು ಬೆಳೆಯುವಲ್ಲಿ ಹೆಚ್ಚಿನ ರೈತರು ಅವಲಂಬಿಸಿದ್ದಾರೆ. ಕೃಷಿಯೊಂದಿಗೆ ಕುರಿ, ಮೇಕೆ ಸಾಕಣೆ, ಪಶುಸಂಗೋಪನೆಯಂತಹ ಉಪಕಸುಬುಗಳನ್ನು ಆಸಕ್ತಿದಾಯಕವಾಗಿ ಅನುಸರಿಸಿದರೆ ಹೆಚ್ಚು ಲಾಭದಾಯಕ ಎಂದರು.
ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದ ಸಾಮಾಜಿಕ ನಕ್ಷೆ, ಗ್ರಾಮದ ಪ್ರಮುಖ ಬೆಳೆಗಳ ಗೋಪುರ ನಕ್ಷೆ, ಸಂಚಾರ ನಕ್ಷೆ, ಋತುಮಾನ ನಕ್ಷೆ, ಹತ್ತಿರದ ಮಾರುಕಟ್ಟೆ. ಆಸ್ಪತ್ರೆ ಮತ್ತಿತರ ಚಲನಶೀಲತೆ ನಕ್ಷೆ, ಜನಸಂಖ್ಯೆ ಮತ್ತು ಸಾಕಷ್ಟರತೆಯ ನಕ್ಷೆಗಳನ್ನು ರಚಿಸಿ ವಿವರಿಸಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಾದ ಭಾರ್ಗವ್ ವೇದಾಂತ್, ವರುಣ್‌ರೆಡ್ಡಿ, ಸಾಬಯ್ಯ, ರವಿ, ಪೂರ್ವಿಕ್‌ಗೌಡ, ಪೃಥ್ವಿರಾಜ್, ಪ್ರಭುರಾಜ್, ಪ್ರೇಮಾ, ಪೂಜಾ, ಪಾವನಿ, ರಶ್ಮಿ, ವಿಸ್ಮಯ, ಪ್ರತ್ಯೂಷಾ ಮತ್ತಿತರರು ನಕ್ಷೆಗಳ ಮೂಲಕ ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಐಶ್ವರ್ಯ, ಶಿಕ್ಷಕ ಎ.ಬಿ.ನಾಗರಾಜ, ಶಿಕ್ಷಕಿ ಎಚ್.ತಾಜೂನ್, ಗ್ರಾಮಸ್ಥರು ಇದ್ದರು.