Sidlaghatta : ಹುಲಿ ಉಗುರಿನಲ್ಲಿ ಲಾಕೆಟ್ ಮಾಡಿಸಿ ಧರಿಸಿರುವ ಚಲನಚಿತ್ರ ನಟ ಜಗ್ಗೇಶ್ ವಿರುದ್ದ ವನ್ಯ ಜೀವಿಗಳ ಸಂರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳು ಶಿಡ್ಲಘಟ್ಟ ಉಪ ವಲಯ ಅರಣ್ಯಾಧಿಕಾರಿ ಜಯಚಂದ್ರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ದೇಶದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನನ್ನು ಉಲ್ಲಂಘಿಸಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯತೆ ಇದೆ. ಈ ದೇಶದಲ್ಲಿ ವನ್ಯ ಜೀವಿಗಳನ್ನು ಬೇಟೆಯಾಡುವುದು, ಸೇರಿದಂತೆ ಪ್ರಾಣಿಗಳ ಚರ್ಮ, ಕೊಂಬು, ಉಗುರು ಹೀಗೆ ಯಾವೊಂದು ವಸ್ತುಗಳನ್ನು ನಮ್ಮಲ್ಲಿ ಇಟ್ಟುಕೊಳ್ಳುವಂತಿಲ್ಲ. ಇಷ್ಟೆಲ್ಲಾ ಗೊತ್ತಿದ್ದು ಕೆಲವರು ಪ್ರಾಣಿಗಳನ್ನು ಕೊಂದು ಅವುಗಳ ಉಗುರಿನಲ್ಲಿ ಲಾಕೆಟ್ ಮಾಡಿಸಿ ಮೆರೆಯುವುದು ಸರಿಯಲ್ಲ. ಅಂತಹವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಇನ್ನು ಚಿತ್ರ ನಟ ಜಗ್ಗೇಶ್ ಟಿವಿ ಸಂದರ್ಶನವೊಂದರಲ್ಲಿ ತಮ್ಮ ಕತ್ತಲ್ಲಿದ್ದ ಹುಲಿ ಉಗುರಿನ ಲಾಕೆಟ್‌ನ್ನು ಪ್ರದರ್ಶಿಸಿ ಇದನ್ನು ಸ್ವತಃ ಅವರ ತಾಯಿಯವರೇ ಮಾಡಿಸಿದ್ದಾರೆ ಎಂದು ಹೇಳಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ಇದನ್ನು ಪೊಲೀಸ್ ಹಾಗು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಲಯ ಅರಣ್ಯಾಧಿಕಾರಿ ಜಯಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ಎ.ಆರ್.ನವೀನ್‌ಕುಮಾರ್, ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ವಿ.ಮುನಿಯಪ್ಪ, ಪದಾಧಿಕಾರಿಗಳಾದ ಹರೀಶ್, ವೆಂಕಟರೆಡ್ಡಿ, ಚಂದ್ರಶೇಖರ್ ಬಾಬು ಹಾಜರಿದ್ದರು.