ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಠಾಣೆ ವ್ಯಾಪ್ತಿಯ ಕುದುಪಕುಂಟೆ ಬಳಿ ಶನಿವಾರ ನಡೆದಿದೆ. ರೈತ ಸಂಘ, ಸ್ಥಳೀಯರು ಹಾಗೂ ಮೃತರ ಕುಟುಂಬದವರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಅಕ್ರಮ ಕಲ್ಲುಗಣಿಗಾರಿಕೆಯನ್ನು ತಡೆಯಬೇಕು, ಗುಂಡಿಗಳು ನಿರ್ಮಾಣವಾದ ರಸ್ತೆಯ ದುರಸ್ತಿ ಕಾರ‍್ಯ ನಡೆಸಬೇಕು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕೊನೆಗೂ ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೈ ಬಿಟ್ಟರು.
ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಠಾಣೆಯ ವ್ಯಾಪ್ತಿಯ ಕುದುಪಕುಂಟೆ ಬಳಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಯರ್ರಹಳ್ಳಿಯ 65 ವರ್ಷ ವಯಸ್ಸಿನ ರೈತ ಮುನಿಸ್ವಾಮಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪುರಬೈರೇನಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕಲ್ಲುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.
ಅಕ್ರಮ ಗಣಿಗಾರಿಕೆಯನ್ನು ಕೂಡಲೆ ನಿಲ್ಲಿಸಬೇಕು, ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ದಿಬ್ಬೂರಹಳ್ಳಿ ಠಾಣೆಯ ಎಸ್‌ಐ ಪಾಪಣ್ಣ ಅವರನ್ನು ಅಮಾನತ್ತು ಮಾಡಬೇಕು. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರಿಂದಲೆ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಹಾಗೂ ಈ ರಸ್ತೆಯನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರಿಂದಲೂ ಪರಿಹಾರವನ್ನು ಕೊಡಿಸಬೇಕೆಂದು ಪ್ರತಿಭಟನೆಯನ್ನು ನಡೆಸಲಾಯಿತು.
ಮೃತರ ಕುಟುಂಬದವರು, ರೈತ ಸಂಘದ ಪುಟ್ಟಣ್ಣಯ್ಯ ಬಣದ ಸದಸ್ಯರು, ಸ್ಥಳೀಯರು ಪ್ರತಿಭಟನೆ ನಡೆಸಿದರು. ಡಿಸಿ ಹಾಗೂ ಎಸ್ಪಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್, ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು.
ಅಕ್ರಮ ಗಣಿಗಾರಿಕೆಯನ್ನು ಈ ಕ್ಷಣದಿಂದಲೆ ನಿಲ್ಲಿಸಲಾಗುವುದು, ರಸ್ತೆಯ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರಿಂದ ಹಾಗೂ ಸರ್ಕರದಿಂದ ಸಿಗುವ ಪರಿಹಾರವನ್ನು ಕೊಡಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದರು.