ಬಯಲುಸೀಮೆಯ ಈ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ವರ್ಷದ ಉದ್ದಕ್ಕೂ ಕಾಡುತ್ತಿದೆ. ಹಾಗಾಗಿ ಮೇಕೆದಾಟು ಯೋಜನೆಯನ್ನು ಈ ಜಿಲ್ಲೆಗೂ ವಿಸ್ತರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಎಬಿಡಿ ಗ್ರೂಫ್‌ನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ತಿಳಿಸಿದರು.
ನಗರದ ಎಬಿಡಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಗೂ ನೀರು ಹರಿಯುವಂತೆ ಸರ್ಕಾರದ ಮೇಲೆ ಕಾಂಗ್ರೆಸ್ ಮುಖಂಡರ ಮೂಲಕ ಒತ್ತಡ ಹಾಕುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ತಾಲ್ಲೂಕಿನಿಂದ 200 ಬಸ್‌ಗಳಲ್ಲಿ ಕಾಂಗ್ರೆಸ್ ಕಾರ‍್ಯಕರ್ತರು ಮೇಕೆದಾಟು ಹೋರಾಟದಲ್ಲಿ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಭಾಗವಹಿಸಿದ್ದೆವು ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು ನಮ್ಮ ಗ್ರೂಪ್ ನಿಂದ ಬೋರ್‌ವೆಲ್ ಲಾರಿ ಖರೀದಿಸಿ ತುರ್ತು ಅಗತ್ಯವಿರುವ ಗ್ರಾಮಗಳಲ್ಲಿ ನಮ್ಮ ಟ್ರಸ್ಟ್ ನಿಂದಲೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಕೆಲಸವನ್ನು ಈಗಾಗಲೆ ಆರಂಭಿಸಲಾಗಿದೆ ಎಂದರು.
ಜತೆಗೆ ನಮ್ಮ ಟ್ರಸ್ಟ್ ನಿಂದ 6 ಆಂಬ್ಯುಲೆನ್ಸ್‌ಗಳನ್ನು ಖರೀದಿಸಿದ್ದು ಸಾರ್ವಜನಿಕ ಬಳಕೆಗೆ ಶೀಘ್ರದಲ್ಲೆ ಸಮರ್ಪಿಸಲಾಗುವುದು. ಇನ್ನು ಮೇಲ್‌ಮತ್ತೂರಿನ ಓಂ ಶಕ್ತಿ ದೇವಾಲಯಕ್ಕೆ ಭಕ್ತರನ್ನು ಉಚಿತ ಬಸ್ ವ್ಯವಸ್ಥೆ ಮಾಡಿ ಕಳುಹಿಸಲು ಭರವಸೆ ನೀಡಿದ್ದೆನಾದರೂ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಓಂ ಶಕ್ತಿ ದೇವಾಲಯಕ್ಕೆ ಕಳುಹಿಸುವ ಕಾರ‍್ಯವನ್ನು ಸ್ಥಗಿತಗೊಳಿಸಿದ್ದು ಮುಂದಿನ ದಿನಗಳಲ್ಲಿ ಮತ್ತೆ ಕಳುಹಿಸಲಾಗುವುದು ಎಂದು ಹೇಳಿದರು.
ಈಗಾಗಲೆ ಕಳೆದ ಒಂದು ವರ್ಷದಿಂದ ತಾಲ್ಲೂಕಿನಲ್ಲಿ ಮನೆ ಮನೆಗೂ ದಿನಸಿ ಕಿಟ್ ವಿತರಣೆ, ವಿಕಲಚೇತನರಿಗೆ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುವುದು, ಹಳ್ಳಿಗಳಲ್ಲಿ ಬೋರ್‌ವೆಲ್ ಕೊರೆಸುವುದು, ಆಂಬ್ಯುಲೆನ್ಸ್‌ಗಳ ಸಮರ್ಪಣೆ ಇನ್ನಿತರೆ ಸಾಮಾಜಿಕ ಕಾರ‍್ಯಗಳನ್ನು ನಡೆಸುತ್ತಿದ್ದೇನೆ.
ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೇಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಟಿಕೇಟ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಭರವಸೆ ನೀಡಿದ್ದಾರೆ. ಒಂದು ವೇಳೆ ಟಿಕೇಟ್ ಸಿಗದಿದ್ದಲ್ಲಿ ಬಂಡಾಯ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಯಾರೋ ಕಿಡಿಗೇಡಿಗಳು ಅದರಲ್ಲಿ ನಡೆಸಿದ ಮಾತುಕತೆಯನ್ನು ತಿರುಚಿ ವೈರಲ್ ಮಾಡುತ್ತಿದ್ದಾರೆ. ಅದರಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರನ್ನು ಕೀಳಾಗಿ ಮಾತನಾಡಿದ್ದಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾನು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಮಾತನಾಡಿ, ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ಪಷ್ಟಪಡಿಸಿ ಮಾಹಿತಿ ನೀಡಿದ್ದೇನೆ. ನಾನು ಈ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿ ನನ್ನದೆಂದು ವೈರಲ್ ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.