Sidlaghatta : ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು ನಮ್ಮ ಸಂವಿಧಾನದಿಂದ. ಕಟ್ಟಕಡೆಯ ಪ್ರಜೆಗೂ ಸಮಾನ ಹಕ್ಕನ್ನು ನೀಡಿದ ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರುಗಳಿಗೆ ನಾವು ಋಣಿಯಾಗಿರಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜನೆ ಮಾಡಲಾಗಿದ್ದ 75ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಹಾಗೂ ಯುವಶಕ್ತಿಯಿಂದ ಕೂಡಿರುವ ರಾಷ್ಟ್ರವಾದ ಭಾರತವನ್ನು ಎಲ್ಲಾ ದೇಶಗಳಿಗಿಂತಲೂ ಅತ್ಯುನ್ನತ ಸ್ಥಿತಿಗೆ ಕರೆದೊಯ್ಯಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರದ ಹಿರಿಮೆಯ ಬಗ್ಗೆ ತಿಳುವಳಿಕೆ ನೀಡುವ ಜೊತೆಗೆ ದೇಶದ ಸಂವಿಧಾನದ ಉದ್ದೇಶಗಳು, ರಚನೆ ಮಾಡಿದ ರೀತಿ, ಅದನ್ನು ಅನಸರಿಸಬೇಕಾದಂತಹ ಅನಿವಾರ್ಯತೆ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಭಾರತೀಯರ ಐಕ್ಯತೆಯ ಸಂಕೇತವಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ. ಈ ದೇಶದ ಪ್ರತಿಯೊಬ್ಬರೂ ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಗಣತಂತ್ರ ವ್ಯವಸ್ಥೆಯ ಚೌಕಟ್ಟಿನಲ್ಲಿ, ಜಾತ್ಯತೀತ ಮೌಲ್ಯಗಳ ಪರಧಿಯಲ್ಲಿ ಮತ್ತು ಭ್ರಾತೃತ್ವದ ಬೆಸುಗೆಯಲ್ಲಿ ಸತ್ಯ,ನಿಷ್ಠೆ, ಪ್ರಾಮಾಣಿಕತೆಯಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸಲು ಮತ್ತಷ್ಟು ಸಾಂಘಿಕವಾಗಿ ಶ್ರಮಿಸೋಣ. ತನ್ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆದರ್ಶಗಳನ್ನು ಎತ್ತಿ ಹಿಡಿಯೋಣ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ಮಾದರಿಯ ಕವಾಯತುಗಳನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು, ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ತಾದೂರು ರಘು ಹಾಜರಿದ್ದರು.