Home News 6ನೇ ಕನ್ನಡ ಸಾಹಿತ್ಯ ಸಮ್ಮೇಳನ

6ನೇ ಕನ್ನಡ ಸಾಹಿತ್ಯ ಸಮ್ಮೇಳನ

0

ತೆಲುಗು ಭಾಷೆಯ ಪ್ರಭಾವವೇ ಹೆಚ್ಚಾಗಿರುವ ರೇಷ್ಮೆನಗರಿಯೆಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಡ್ಲಘಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿಕೊಂಡಿರುವ ಛಾಯಾಗ್ರಾಹಕ, ಲೇಖಕ ಡಿ.ಜಿ. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನೆರವೇರಿತು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರದ್ವಜವನ್ನು ತಹಶೀಲ್ದಾರರ ಬದಲಿಗೆ ಶಿರಸ್ತೆದಾರ್ ನರೇಂದ್ರಬಾಬು ನೆರವೇರಿಸಿದರು. ನಾಡಧ್ವಜಾರೋಹಣವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೆಂಕಟೇಶ್ ನೆರವೇರಿಸಿದರು. ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೆರವೇರಿಸಿದರು. ನಾಡಗೀತೆಯನ್ನು ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ರೈತ ಗೀತೆಯನ್ನು ಎಂ.ಕೆಂಪಣ್ಣ ಮತ್ತು ಟಿ.ನಾರಾಯಣಸ್ವಾಮಿ ತಂಡದವರು ನೆರವೇರಿಸಿಕೊಟ್ಟರು.
ಬೆಳಿಗ್ಗೆ 10.30 ಗಂಟೆಗೆ ನಗರದ ಬಸ್ ನಿಲ್ದಾಣದ ಬಳಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಪೊಲೀಸ್ ಸಿಪಿಐ ಟಿ.ಸಿ.ವೆಂಕಟೇಶ್ ಚಾಲನೆ ನೀಡಿದರು. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ತಂಡಗಳ ಸಂಗೀತ ವಾದ್ಯಗಳೊಂದಿಗೆ, ನಗರದ ಸವಿತಾ ಸಮಾಜದ ಕಲಾವಿದರ ತಂಡಗಳ ಮಂಗಳವಾದ್ಯಗಳೊಂದಿಗೆ ಮೆರಣಿಗೆ ನಡೆಯಿತು. ನಗರದ ಕೋಟೆ ವೃತ್ತದ ಮುಖಾಂತರ ವಾಸವಿ ಕಲ್ಯಾಣಮಂಟಪಕ್ಕೆ ತಲುಪಿತು. ಈ ಮಧ್ಯೆ ಮೆರವಣಿಗೆ ಹೊರಟಿದ್ದ ರಸ್ತೆಯುದ್ದಕ್ಕೂ ವಿವಿಧ ಶಿಕ್ಷಣ ಸಂಸ್ಥೆಗಳ ಮಕ್ಕಳು, ಸಾರ್ವಜನಿಕರು ಪುಷ್ಪ ನಮನಗಳ ಮೂಲಕ ಗೌರವ ಸಲ್ಲಿಸಿದರು.
ಮೆರವಣಿಗೆ ಪೂರ್ಣಕುಂಭ ಸ್ವಾಗತ ಕೋರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೆಂದ್ರಗಳ ಕಾರ್ಯಕರ್ತೆಯರಿಂದ ಕಲಶಗಳೊಂದಿಗೆ ಸ್ವಾಗತ ಕೋರುವುದರ ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಾಸವಿ ಕಲ್ಯಾಣ ಮಂಟಪದಲ್ಲಿ ನೇಗಿಲ ಯೋಗಿ ಅನ್ನದಾತ ವೇದಿಕೆಯಲ್ಲಿ ಆಯೋಜನೆಗೊಂಡಿದ್ದ 6 ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆ, ರೈತಗೀತೆಗಳ ಗಾಯನ ಕಾರ್ಯಕ್ರಮವನ್ನು ಮಹೇಶ್ ಮತ್ತು ರವಿಕೋಲಾರ್ ಅವರ ತಂಡ ನಡೆಸಿಕೊಟ್ಟಿತು. ಈ ನಡುವೆ ನಾಡು, ನುಡಿಯ ಹಿರಿಮೆಯ ಬಗ್ಗೆ ಹಲವಾರು ಸಾಹಿತಿಗಳು ಬರೆದಿರುವ ಸಾಹಿತ್ಯ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಸಭೀಕರಲ್ಲಿ ಕನ್ನಡಾಭಿಮಾನ ಮೂಡಿಸಿದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಲೇಖಕರು ಬರೆದಿದ್ದ ಕನ್ನಡ ಪುಸ್ತಕಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಪುಸ್ತಕ ಮಳಿಗೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಉದ್ಘಾಟನೆ ಮಾಡಿದರು. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಗಮಿಕರು ಹಾಗೂ ಅರ್ಚಕರ ವೇದಘೋಷಗಳೊಂದಿಗೆ ಆರಂಭ ಮಾಡಲಾಯಿತು. ಎಸ್.ವಿ.ಮಾಲತಿ, ಟಿ.ಸಾವಿತ್ರಮ್ಮ ಅವರು ಪ್ರಾರ್ಥನೆ ನೆರವೇರಿಸಿಕೊಟ್ಟರು. ಭುವನೇಶ್ವರಿ ಭಾವಚಿತ್ರವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಅನಾವರಣಗೊಳಿಸಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಿ.ಜಿ.ಮಲ್ಲಿಕಾರ್ಜುನ ಅವರು ರಚಿಸಿರುವ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಬಿಡುಗಡೆ ಮಾಡಲಾಯಿತು. ಪರಿಷತ್ತಿನ ದ್ವಜವನ್ನು ನಿಕಟ ಪೂರ್ವ ಅಧ್ಯಕ್ಷ ಎನ್.ಶಿವಣ್ಣ ಹಸ್ತಾಂತರಿಸಿದರು.
ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷತೆ ವಹಿಸಿ ಶಾಸಕ ಎಂ.ರಾಜಣ್ಣ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಗ್ರಾಮಾಂತರ ಪ್ರದೇಶಗಳಲ್ಲಿ ನೆರವೇರಬೇಕು. ಗ್ರಾಮೀಣ ಭಾಗದಲ್ಲಿನ ಜನರಿಗೆ ಭಾಷೆ, ಕಲೆ, ಸಾಹಿತ್ಯ,ಜಾನಪದ ಕಲೆಗಳಿಗಿರುವ ಹಿರಿಮೆಯ ಬಗ್ಗೆ ಅರಿವು ಮೂಡಿಸಬೇಕು. ಯುವಜನರು ಸಾಹಿತ್ಯಾಸಕ್ತರಾಗಬೇಕು ಎಂದರು.
ನಿಕಟ ಪೂರ್ವ ಅಧ್ಯಕ್ಷ ಎನ್.ಶಿವಣ್ಣ ಮಾತನಾಡಿ, ಸಾಹಿತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಬೇಕಾದರೆ ಯುವಜನರು ಹೆಚ್ಚು ಆಸಕ್ತಿ ವಹಿಸಬೇಕು. ಮುಂದಾಳತ್ವ ವಹಿಸಬೇಕು. ಹಿರಿಯರು ಮಾರ್ಗದರ್ಶನ ನೀಡಬೇಕು. ಯಾವುದೇ ಸಂಸ್ಕೃತಿಯಲ್ಲಿನ ಹಿರಿಮೆ ಅನಾವರಣಗೊಳ್ಳಬೇಕಾದರೆ ಇದಕ್ಕೆ ಮೂಲ ಕಾರಣ ಭಾಷೆ, ಅಂತಹ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಪ್ರಾಂತೀಯ ಭಾಷೆಗಳು ಸಕ್ರಿಯವಾದಾಗ ಮಾತ್ರ ಭಾಷೆಗಳು ಉಳಿಯುತ್ತವೆ. ಪ್ರಾಂತೀಯ ಭಾಷೆಗಳಿಗೆ ಉತ್ತಮ ಸ್ಥಾನಮಾನ ಸಿಗದಿದ್ದರೆ ಗಂಡಾಂತರ ಕಾದಿದೆ. ಯುವಜನರು ಕನ್ನಡ ಸೇನೆ ಕಟ್ಟುವ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಕನ್ನಡಿಗರಿಂದಲೇ ಕನ್ನಡ ಭಾಷೆಗೆ ಧಕ್ಕೆಯಾಗುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧರ್ಮ ಜಾತಿ ರಹಿತವಾದ ಚಿಂತನೆಗಳು ನಡೆಯಬೇಕು. ಶಾಲೆಗಳಲ್ಲಿರುವ ಗ್ರಂಥ ಭಂಡಾರಗಳು ಧೂಳು ತಿನ್ನುತ್ತಿದ್ದು ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವಂತಹ ಹವ್ಯಾಸ ಬೆಳೆಸಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ತಾಲ್ಲೂಕಿನ ಗಡಿಭಾಗಗಳಲ್ಲಿನ ಜನರಿಗೆ ಕನ್ನಡದ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕನ್ನಡದಲ್ಲಿ ವ್ಯವಹರಿಸುವುದನ್ನು ಕಲಿಸಿಕೊಡಬೇಕು ಎಂದರು.
ಹಿರಿಯ ಸಾಹಿತಿ ಸ.ರಘುನಾಥ್ ಮಾತನಾಡಿ, ಸಾಹಿತ್ಯವೆಂಬುದಕ್ಕೆ ಹಲವಾರು ಆಯಾಮಗಳಿಗೆ,ವಿಭಿನ್ನವಾದ ಮುಖಗಳನ್ನು ಹೊಂದಿಕೊಂಡಿದ್ದು ಛಾಯಾಗ್ರಹಣ ಒಂದು ಕಲೆಯಾಗಿದ್ದು ಛಾಯಾಗ್ರಹಣ ಮೂಲಕ ತೆಗೆದಂತಹ ಅದೆಷ್ಟೋ ಚಿತ್ರಗಳು ಅಕ್ಷರ ರೂಪದ ಭಾಷೆಗೆ ತರ್ಜುಮೆಗೊಂಡು ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಾರಲು ಸಹಕಾರಿಯಾಗುತ್ತವೆ. ಇಂತಹ ಸಾಹಿತ್ಯವನ್ನು ಉಳಿಸಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಶಿಡ್ಲಘಟ್ಟ ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಪ್ರಮಾಣದ ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ಒಬ್ಬ ಲೇಖಕನ ಸಾಲ ತೋರಿಸಲು ಸಹಕಾರಿಯಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾಗಿ ಡಿ.ಜಿ.ಮಲ್ಲಿಕಾರ್ಜುನ ಮಾತನಾಡಿ, ಸಹಕಾರಿ ತತ್ವದಡಿಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ಜನರ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ನಿರಂತರವಾಗಿ ಜಲಪಹರಣಗಳು ನಡೆಯುತ್ತಿವೆ. ಬಯಲು ಸೀಮೆ ಭಾಗಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆ ಬದಲಾಗಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಸಿಗಬೇಕು. ಗ್ರಾಮೀಣ ಭಾಗದಲ್ಲಿನ ಜನರ ಬದುಕು ಸುಧಾರಣೆಯಾಗಬೇಕು. ಪ್ರತಿಯೊಂದು ಸರ್ಕಾರಿ ಶಾಲೆಗಳು ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾತಿನಿದ್ಯ ಸಿಗಬೇಕು. ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆಯನ್ನುಉಳಿಸಬೇಕು. ತಾಲ್ಲೂಕಿನಲ್ಲಿರುವ ಪ್ರಸಿದ್ಧ ಸ್ಥಳಗಳಾದ ತಲಕಾಯಲಬೆಟ್ಟ, ರಾಮಲಿಂಗೇಶ್ವರ ಬೆಟ್ಟ, ಒಡೆಯನಕೆರೆ, ವೆಂಕಟಾಪುರದ ಪಾರಂಪರಿಕ ಬೇವಿನ ಮರಗಳು ಸೇರಿದಂತೆ ಎಲ್ಲವನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು. ದೇಶೀ ತಳಿಯ ಹಸುಗಳ ಪೋಷಣೆಗೆ ಜನರು ಮುಂದಾಗಬೇಕು. ರೈತರು ಬೆಳೆಯುತ್ತಿರುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸಬೇಕು. ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸಲು ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳು ತಾಯಿ, ನೀರಿನ ಅಭಾವ,ಭಾಷೆಯ ಮುಂತಾದ ವಿಚಾರಗಳ ಬಗ್ಗೆ ಕವನಗಳನ್ನು ವಾಚಿಸಿದರು. ಕಲಿಯುವ ಕೈಗೆ ಓದುವ ಪುಸ್ತಕ ಎಂಬ ಕಾರ್ಯಕ್ರಮದಡಿಯಲ್ಲಿ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳು ತಾವು ಮೆಚ್ಚಿ ಓದಿದ ಪುಸ್ತಕದ ಕುರಿತು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಹಶೀಲ್ದಾರ್ ಅಜೀತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್‌.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತ ಕೃಷ್ಣ, ಮಾಜಿ ಅಧ್ಯಕ್ಷ ಎಸ್‌.ವಿ.ನಾಗರಾಜ್ ರಾವ್, ಸಾಹಿತಿಗಳಾದ ಸ.ರಘುನಾಥ್, ನಿಕಟ ಪೂರ್ವ ಅಧ್ಯಕ್ಷರಾದ ಡಾ.ಸತ್ಯನಾರಾಯಣರಾವ್, ಶಿವಣ್ಣ, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ರವಿಪ್ರಕಾಶ್, ಪ್ರತೀಶ್, ಬಿ.ವಿರೂಪಾಕ್ಷಪ್ಪ ಸೇವಾ ಟ್ರಸ್ಟ್‌ ಅಧ್ಯಕ್ಷ ಜೆ.ಸಂದೀಪ್‌ ಮತ್ತಿತರರು ಹಾಜರಿದ್ದರು.