ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ಶಾಸಕ ಎಂ.ರಾಜಣ್ಣ ಮುಂದಾಗುತ್ತಿದ್ದಾರೆ ಎಂದು ಡಿ.ವೈ.ಎಫ್.ಐ.ಸಂಘಟನೆಯ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ವರ್ಷದ ಹಿಂದೆ ಶಾಸಕರಾದ ನಂತರ ಎಂ.ರಾಜಣ್ಣ ಅವರಿಗೆ ನಗರದ ಪದವಿ ಪೂರ್ವ ಕಾಲೇಜಿನಲ್ಲಿನ ಹಲವಾರು ಮೂಲಭೂತಸೌಕರ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ತಂದಿದ್ದೆವು, ಈ ಬಗ್ಗೆ ಹಲವು ಬಾರಿ ಪ್ರತಿಭಟನೆಗಳನ್ನೂ ಮಾಡಿದ್ದೇವೆ, ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ಬರುವಂತಹ ನೂರಾರು ಮಂದಿ ಹೆಣ್ಣು ಮಕ್ಕಳು ಕಾಲೇಜಿನಲ್ಲಿ ಶೌಚಾಲಯಗಳ ಕೊರತೆಯಿಂದ ನೀರು ಕುಡಿಯುವುದನ್ನು ಬಿಟ್ಟಿದ್ದಾರೆ, ಪುಂಡಪೋಕರಿಗಳು ಕಾಲೇಜಿನ ಸಮೀಪದಲ್ಲಿ ಬಂದು ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಪ್ರಕರಣಗಳು ನಡೆದಿರುವ ಬಗ್ಗೆಯೂ ಶಾಸಕರ ಗಮನಕ್ಕೆ ತಂದಿದ್ದೇವೆ, ಒಂದು ತಿಂಗಳ ಅವಧಿಯಲ್ಲಿ ಕಾಲೇಜಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದ್ದ ಶಾಸಕರು, ಒಂದೂವರೆ ವರ್ಷವಾದರೂ ಈ ಬಗ್ಗೆ ಗಮನಕ್ಕೆ ತೆಗೆದುಕೊಂಡಿರಲಿಲ್ಲ, ಹಾಗಾಗಿ ಶಾಸಕರ ಮನೆಯ ಮುಂದೆ ಎಸ್.ಎಫ್.ಐ.ಸಂಘಟನೆಯ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಶಾಸಕರು ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ವಿಧ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರನ್ನು ಕರೆದು ಸಂಘಟನೆಗಳಿಗೆ ಬೆಂಬಲ ನೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ಪರೀಕ್ಷೆಗಳಲ್ಲಿ ನಿಮ್ಮ ಅನುತ್ತೀರ್ಣ ಮಾಡುವುದಾಗಿ ವಿದ್ಯಾರ್ಥಿಗಳಲ್ಲಿ ಭಯವನ್ನು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯ ಪೂರ್ವದಲ್ಲಿ ತಾಲ್ಲೂಕಿನ ಪ್ರತಿಯೊಂದು ಮನೆಯ ಬಾಗಿಲಿಗೆ ಬಂದು ಮತ ನೀಡುವಂತೆ ಕೇಳುವ ಹಕ್ಕು ಅವರಿಗಿರುವುದಾದರೆ, ಅವರ ಮನೆಯ ಮುಂದೆ ಕುಳಿತು ಸಂವಿಧಾನ ಬದ್ಧವಾಗಿ ನಮ್ಮ ಹಕ್ಕುಗಳನ್ನು ಕೇಳುವ ಹಕ್ಕು ನಮಗಿಲ್ಲವೆ. ನಮ್ಮಲ್ಲಿ ಭಯವನ್ನು ಹುಟ್ಟಿಸುವಂತಹ ತಂತ್ರಗಾರಿಕೆಯನ್ನು ಶಾಸಕರು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿ ಎಂದಿದ್ದಾರೆ. ನಾವು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ರಾಜಕೀಯ ಮಾಡುವವರು ರಾಜಕಾರಣಿಗಳು, ನಮ್ಮ ಸಂಘಟನೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತದೆ. ಕಾಲೇಜಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಎಸ್.ಎಫ್.ಐ ಜಿಲ್ಲಾ ಮುಖಂಡ ರಾಜಶೇಖರ್ ಮಾತನಾಡಿ, ಸಂವಿಧಾನಬದ್ಧವಾಗಿ ಸಂಘಟನೆಗಳನ್ನು ರೂಪಿಸುವಂತಹ ಹಕ್ಕು ಪ್ರತಿಯೊಬ್ಬರಿಗೂ ಇದೆ, ಕಳೆದ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಅವರು, ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ದಿನವೂ ಗಮನಹರಿಸಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿದ್್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ, ರಸ್ತೆಯ ಅವ್ಯವಸ್ಥೆಗಳ ಬಗ್ಗೆ ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ನೀಡಲು ಕರೆದರೆ, ನಾನು ಬರುವುದಿಲ್ಲವೆಂಬ ಉತ್ತರವನ್ನು ನೀಡಿದ್ದಾರೆ. ನಮ್ಮ ಹಕ್ಕುಗಳನ್ನು ಕೇಳುವ ಅಧಿಕಾರ ನಮಗಿದೆ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ನೇರವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ನಮ್ಮ ಮೇಲೆ ಕೇಸುಗಳನ್ನು ದಾಖಲಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ, ನಮ್ಮ ಹೋರಾಟದ ಹಕ್ಕನ್ನು ಕಸಿಯಲಾಗುತ್ತಿದೆ, ಶಾಸಕರ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.