ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಂಗೆ ಬೀಜದ ಕೊಯ್ಲು ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಶ್ರಮದಿಂದ ಬೆಳೆದಿರುವ ಹೊಂಗೆಮರಗಳು ಪ್ರತಿವರ್ಷ ಅವರಿಗೆ ವರಮಾನವನ್ನು ತರುತ್ತಿದೆ.
ಹೊಂಗೆಯ ಬೀಜದಿಂದ ಎಣ್ಣೆ ತೆಗೆದು ಅದನ್ನು ಜೈವಿಕ ಇಂಧನ ರೂಪಕ್ಕೆ ಪರಿವರ್ತಿಸಿ ಬಳಕೆ ಮಾಡಲು ಸಾಧ್ಯವಿದೆ. ಗ್ರಾಮಗಳಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಮತ್ತು ಹೊಲ, ತೋಟಗಳ ಬದುಗಳ ಮೇಲೆ ಬೆಳೆದರೆ ರೈತರಿಗೆ ಲಾಭವಿದೆಯೆಂದು ಅದನ್ನು ಬೆಳೆಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಆದರೂ ಹೊಂಗೆ ಮರಗಳನ್ನು ಅಷ್ಟಾಗಿ ಬೆಳೆಯಲು ಉತ್ಸುಕತೆಯಿಲ್ಲ.
ಹೊಂಗೆ ಬೀಜದ ಮೂಲಕ ವಿದ್ಯಾರ್ಥಿಗಳಿಗೆ ಹೊಂಗೆಯ ಉಪಯುಕ್ತತೆಗಳು, ಬೀಜದಿಂದ ತಯಾರಿಸುವ ಬಯೋಡೀಸಲ್, ಪೋಷಕಾಂಶಗಳು ಹೆಚ್ಚಿರುವ ಹೊಂಗೆ ಎಲೆಯು ಗೊಬ್ಬರವಾದಾಗ ಸಾವಯವ ಗೊಬ್ಬರವಾಗುವ ರೀತಿ, ಭೂಮಿಯ ಫಲವತ್ತತೆ, ಬಯೋಡೀಸೆಲ್ ತಯಾರಿಕಾ ರೀತಿ, ಹೊಂಗೆ ಎಣ್ಣೆ ಸಂಸ್ಕರಿಸುವಾಗ ಗ್ಲಿಸರಿನ್ ಮತ್ತು ಸೋಪ್ ವಾಟರ್ ಸಿಗುವುದನ್ನು ಸೋಪು ತಯಾರಿಕೆಯಲ್ಲಿ ಬಳಸಬಹುದು, ಮುಂತಾದ ಹಲವು ವೈಜ್ಞಾನಿಕ, ಕೃಷಿ, ಸಂಗತಿಗಳ ಪಾಠವೂ ವಿದ್ಯಾರ್ಥಿಗಳಿಗೆ ನಡೆಯುತ್ತದೆ.
‘ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚು. ಹೊಂಗೆ ಬೀಜಗಳನ್ನು ಮಾರುವ ಬದಲು ಎಣ್ಣೆ ತೆಗೆದು ಮಾರಾಟ ಮಾಡಿದರೆ ಹೆಚ್ಚು ಹಣ ಸಿಗುತ್ತದೆ. ಎಣ್ಣೆ ತೆಗೆದ ನಂತರ ಹಿಂಡಿ ಕೂಡ ಸಿಗುತ್ತದೆ. ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದು ಅಥವಾ ಮಾರಾಟ ಮಾಡಬಹುದು. ಮಾಡೋಣ ಸರ್, ಎನ್ನುತ್ತಾರೆ. ನಮ್ಮೂರಲ್ಲಿ ದಾರಿ ಪಕ್ಕ ಉದ್ದಕ್ಕೂ ಹೊಂಗೆ ಮರ ಹಾಕಬೇಕು ಸರ್. ನಮ್ಮ ವಿದ್ಯುತ್ ನಾವೇ ತಯಾರಿಸಬಹುದು ಅಲ್ವಾ ಎಂಬ ಆಲೋಚನೆಯನ್ನು ಮಕ್ಕಳು ಹೇಳುವಾಗ ನಮಗೆ ಖುಷಿಯಾಗುತ್ತದೆ’ ಎಂದು ಶಿಕ್ಷಕ ರಾಮಕೃಷ್ಣ ತಿಳಿಸಿದರು.