ಸರಿಯಾದ ಸಮಯಕ್ಕೆ ಅಡುಗೆ ಮಾಡಿಲ್ಲವೆಂದು ಕುಡಿದ ಅಮಲಿನಲ್ಲಿದ್ದ ಮಗ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ದಾರುಣ ಘಟನೆ ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಮಗ ದೇವರಾಜ್(28) ನಿಂದಲೇ ಹತ್ಯೆಯಾದ ನತದೃಷ್ಟ ತಾಯಿ ಮುನಿರತ್ನಮ್ಮ(45). ಜೀವನೋಪಾಯಕ್ಕೆ ಮುನಿರತ್ನಮ್ಮ ಇತ್ತೀಚೆಗೆ ಹಸುವನ್ನು ಮಾರಿ ಬಂದ ಹಣದಿಂದ ಸಂಸಾರದ ದೋಣಿ ಸಾಗಿಸುತ್ತಿದ್ದಳು. ಆದರೆ ಕುಡಿತ ಚಟಕ್ಕೆ ದಾಸನಾಗಿದ್ದ ಮಗ ದೇವರಾಜ್ ಹಸು ಮಾರಿದ ಹಣವನ್ನು ನೀಡುವಂತೆ ಜಗಳ ಮಾಡಿದ್ದಾನೆನ್ನಲಾಗಿದೆ. ಭಾನುವಾರ ರಾತ್ರಿ ಕಂಠ ಫೂರ್ತಿ ಕುಡಿದು ಮನೆಗೆ ಬಂದ ದೇವರಾಜ್ ಊಟ ಬಡಿಸುವಂತೆ ತಾಯಿಗೆ ಹೇಳಿದಾಗ, ಅಡುಗೆ ಮಾಡಿಲ್ಲವೆಂದು ತಾಯಿ ಹೇಳಿದ್ದೇ ತಡ ಜಗಳಕ್ಕಿಳಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರಣಾಂತಿಕ ಹಲ್ಲೆಯಿಂದ ಗಂಭೀರ ಸ್ಥಿತಿಗೆ ಜಾರಿದ ಮುನಿರತ್ನಮ್ಮ ಇಹಲೋಕ ತ್ಯಜಿಸಿದ್ದಾಳೆಂದು ತಿಳಿದು ಬಂದಿದೆ. ಇನ್ನು ತಾಯಿ ಸತ್ತು ಎರಡು ದಿನ ಕಳೆದ್ರೂ ಯಾರಿಗೂ ವಿಷಯ ತಿಳಿಸದ ಮಗ ಹಾಗೂ ಕುಟುಂಬಸ್ಥರು ಮಂಗಳವಾರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು.
ಈ ವೇಳೆ ಮೃತ ಮುನಿರತ್ನಮ್ಮ ಅವರ ತವರು ಮನೆಯವರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿದ ಪಿ.ಎಸ್.ಐ. ಪ್ರದೀಪ್ ಪೂಜಾರಿ ಆರೋಪಿಯನ್ನ ಬಂಧಿಸಿದ್ದಾರೆ. ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
- Advertisement -
- Advertisement -
- Advertisement -
- Advertisement -