ರಾಜ್ಯದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಹಾಗು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಮಹಿಳೆಯರೂ ಸೇರಿದಂತೆ ಶಾಲಾ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಹೆಣ್ಣುಮಕ್ಕಳಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು ೨,೯೬೪ ಅತ್ಯಾಚಾರ ಪ್ರಕರಣಗಳು ರಾಜ್ಯಾದ್ಯಂತ ನಡೆದಿದ್ದರೂ ಸಹ ಕ್ರಮ ಜರುಗಿಸಲು ಸರ್ಕಾರಗಳು ವಿಫಲವಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ೬೭ ವರ್ಷಗಳೆ ಕಳೆದರೂ ಇಂದಿಗೂ ಹೆಣ್ಣು ಮಕ್ಕಳು ಭಯಭೀತರಾಗಿ ಜೀವಿಸಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಪ್ರತಿನಿಧಿಗಳು ಜನರಿಗೆ ಉಪಯೋಗವಿಲ್ಲದ ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡುತ್ತಾರೆ ಆದರೆ ರಾಜ್ಯದಲ್ಲಿ ಹೆಣ್ಣು ಮಕ್ಕಳ ಭದ್ರತೆಗಾಗಿ ಪ್ರತ್ಯೇಕವಾದ ಕಾಯ್ದೆಯನ್ನು ಜಾರಿಗೆ ತರಲು ಇವರಿಂದ ಸಾದ್ಯವಾಗಿಲ್ಲ ಎಂದು ದೂರಿದರು.
ಮಹಿಳೆಯರು ಹಾಗು ಹೆಣ್ಣುಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸದ ಮುಖ್ಯಮಂತ್ರಿ ಹಾಗು ಗೃಹಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯಾದ್ಯಂತ ಎಸ್.ಎಫ್.ಐ. ಸಂಘಟನೆಯ ಮುಖಾಂತರ ಬಂದ್ ಕರೆ ನೀಡಿ ಉಗ್ರವಾದ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಸ್.ಎಫ್.ಐ. ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಎಚ್ಚರಿಕೆ ನೀಡಿದರು.
ಎಸ್.ರಾಜಶೇಖರ್, ಮುಜಾಯಿದ್‌ಪಾಷಾ, ಗುರುಮೂರ್ತಿ, ಅಂಬರೀಶ್, ಮನೋಹರ್, ಮಂಜುಶ್ರೀ, ಮಮತಾ, ಸೌಜನ್ಯ, ಲಾವಣ್ಯ, ನಂದಿನಿ, ಹರ್ಷಿತಾ, ಮುಬಾರಕ್, ಕಾವ್ಯಶ್ರೀ, ರೂಪಶ್ರೀ, ವೀಣಾ, ಜ್ಯೋತಿ, ಅಶ್ವಿನಿ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.