ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಬೇಡಿ. ಹೆಣ್ಣುಮಕ್ಕಳು ಸ್ವಂತ ಚಿಂತನೆ, ಆರ್ಥಿಕ ಸ್ವಾವಲಂಬನೆ, ಶೈಕ್ಷಣಿಕ ಪ್ರಗತಿಯು ಗೌರವ ಸಮಾಜದ ಲಕ್ಷಣಗಳು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ತಿಳಿಸಿದರು.
ನಗರದ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಾನವ ಹಕ್ಕುಗಳ ಜಾಗೃತಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧ ನೀರು, ವಾತಾವರಣ, ಆಹಾರ ಭದ್ರತೆ, ಮೂಲಭೂತ ಸೌಕರ್ಯಗಳು, ಆರೋಗ್ಯ, ಶಿಕ್ಷಣ ಎಲ್ಲವೂ ಮಾನವ ಹಕ್ಕುಗಳೇ. ಮಕ್ಕಳ ಹಾಗೂ ಮಹಿಳೆಯರ ಅಕ್ರಮ ಸಾಗಾಣಿಕೆ, ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಮಾನವ ಹಕ್ಕುಗಳ ಆಯೋಗದ ಪ್ರಯತ್ನ ನಿರಂತರವಾಗಿದೆ. ಯಾರು ಬೇಕಾದರೂ ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಲಿಖಿತವಾಗಿ, ದೂರವಾಣಿ ಮೂಲಕ, ಇ ಮೇಲ್ ಉಚಿತವಾಗಿ ದೂರು ನೀಡಬಹುದು. ಟೋಲ್ ಫ್ರೀ ನಂಬರು 180042523333 ಅಳವಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ 53 ಸಾವಿರ ದೂರುಗಳು ದಾಖಲಾಗಿದ್ದು, 38 ಸಾವಿರ ದೂರುಗಳನ್ನಾಗಲೇ ವಿಲೇವಾರಿ ಮಾಡಿದ್ದೇವೆ. ಮೊದಲು ಹೆಚ್ಚಾಗಿ ಪೊಲೀಸರ ವಿರುದ್ಧ ಬರುತ್ತಿದ್ದ ದೂರುಗಳು, ಕ್ರಮೇಣ ರಸ್ತೆ, ಚರಂಡಿ, ಆರೋಗ್ಯ ಮೊದಲಾದ ಮೂಲಭೂತ ಸೌಲಭ್ಯಗಳ ಕುರಿತಂತೆ ಬರುತ್ತಿವೆ. ತಮ್ಮ ಹಕ್ಕುಗಳ ಬಗ್ಗೆ ಎಳೆವಯಸ್ಸಿನಿಂದಲೇ ಮಕ್ಕಳು ಜಾಗೃತರಾದಾಗ ಸಾಮಾಜಿಕ ಸ್ವಾಸ್ಥ್ಯ ಮೂಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸ್ವಾಭಿಮಾನದ ಬಾಳನ್ನು ಕಟ್ಟಿಕೊಳ್ಳಲು, ಸಂಘರ್ಷ ರಹಿತ ಸಮಾಜವನ್ನು ನಿರ್ಮಿಸಲು ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ. ವಿದ್ಯಾರ್ಥಿಯ ಜೀವನ ವಿಶೇಷವಾದ್ದು. ವ್ಯಕ್ತಿತ್ವ ನಿರ್ಮಾಣವಾಗುವ ಮಹತ್ತರ ಘಟ್ಟವಿದು. ಸಮಾಜದ, ಸಂಬಂಧಿಕರ, ಗುರುಹಿರಿಯರ, ಗೆಳೆಯರ ಸಂಸರ್ಗದಿಂದ ವ್ಯಕ್ತಿಯಾಗಿ ರೂಪುಗೊಳ್ಳುವ ಕ್ರಿಯೆಗೆ ಪೂರಕ ವಾತಾವರಣ ಬೇಕಿದೆ ಎಂದು ಹೇಳಿದರು.
ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕೆಲವು ವಿಷಯಗಳಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಿವೃತ್ತ ಪೊಲೀಸ್ ಐ.ಜಿ.ಪಿ ಉಲ್ಫತ್ ಹುಸೇನ್, ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಲ್.ಬಾಲು, ಮಾನವ ಹಕ್ಕುಗಳ ಆಯೋಗದ ಕಾನೂನು ಸಲಹೆಗಾರ ಪಿ.ಆರ್.ವಿಜಯಕುಮಾರ್, ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷ ಅಮಾನುಲ್ಲಾ, ರಾಜ್ಯ ಘಟಕದ ಸುದರ್ಶನ್, ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಯೂಸುಫ್, ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -