Home News ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕ

ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕ

0

ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ದುಡಿಯುವ ಹೆಂಗಸಿನ ಕಷ್ಟಗಳು, ಅನಕ್ಷರತೆ ಮುಂತಾದ ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಗಾಂಧಿ ನಗರದ ವಿಸ್ಡಂ ವಿದ್ಯಾಸಂಸ್ಥೆ ಆವರಣದಲ್ಲಿ ಈಚೆಗೆ ಐನಾ ಸಂಸ್ಥೆಯ ವತಿಯಿಂದ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಅದಕ್ಕೆ ಪರಿಹಾರವನ್ನೂ ಸೂಚಿಸುವ ನಾಟಕವನ್ನು ಪ್ರದರ್ಶಿಸಲಾಯಿತು.
ಗಂಡು ಮಕ್ಕಳು ವಂಶೋದ್ಧಾರಕರು ಎಂಬ ಭ್ರಮೆಯಿಂದ ವೈದ್ಯರಿಗೆ ಹಣ ನೀಡಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಬೆಳಕು ಚೆಲ್ಲಿದರು. ಹೆಣ್ಣು ಕೂಡ ಕುಟುಂಬವನ್ನು ಪೋಷಿಸಬಲ್ಲಳು ಎಂಬ ಸಂದೇಶ ನೀಡುತ್ತಾ ವೈದ್ಯರು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವುದು ಅಪರಾಧ ಎಂಬುದನ್ನು ನಾಟಕದ ಪಾತ್ರಗಳ ಮೂಲಕ ತಿಳಿಸಲಾಯಿತು.
ಬಾಲ್ಯ ವಿವಾಹ ಮಾಡುವುದು ಅಪರಾಧ ಎಂಬುದನ್ನು ತಿಳಿಸಿಕೊಡುತ್ತಾ ಶಿಕ್ಷಣದಿಂದ ಹೆಣ್ಣು ಸ್ವಾವಲಂಭಿ ಜೀವನ ನಡೆಸಬಹುದೆಂದು ನಾಟಕದಲ್ಲಿ ತೋರಿಸಿದರು. ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪೋಕರಿಗಳನ್ನು ಶಿಕ್ಷಿಸುವ ಚಿತ್ರಣವನ್ನೂ ನೀಡಲಾಯಿತು.
‘ಹೆಣ್ಣಿನ ಶೋಷಣೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ. ಇಂಥಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಶಾಲೆಯ ವತಿಯಿಂದ ಈ ರೀತಿಯ ಸಾಮಾಜಿಕ ಸಂದೇಶ ನೀಡುವ ನಾಟಕವನ್ನು ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುತ್ತಾ ಅರಿವು ಮೂಡಿಸುತ್ತಿರುವುದು ಸಮಂಜಸವಾಗಿದೆ. ಹಿಂದುಳಿದ ವರ್ಗದ ಜನರಿರುವ ಪ್ರದೇಶಗಳಲ್ಲಿ ಈ ರೀತಿಯ ಸಂದೇಶ ಬೀರುವ ನಾಟಕಗಳನ್ನು ಪ್ರದರ್ಶಿಸಬೇಕು’ ಎಂದು ಶಿಕ್ಷಣ ಸಂಯೋಜಕ ರಾಮಣ್ಣ ತಿಳಿಸಿದರು.
ಏಕ ಪೋಷಕ ಇರುವ ಮಕ್ಕಳಿಗೆ ಇಲಾಖೆಯ ವಸತಿ ನಿಲಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಶೋಷಣೆ ಕಂಡುಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡುವಂತೆ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕಾ ಹೇಳಿದರು.
ವಿಸ್ಡಂ ವಿದ್ಯಾಸಂಸ್ಥೆಯ ಮುಖ್ಯಸ್ಥ ವಿ.ನಾಗರಾಜ್, ಮುಖ್ಯಶಿಕ್ಷಕಿ ಮಾಲಾ ನಾಗರಾಜ್, ಶಿಕ್ಷಕಿಯರಾದ ಮಾಲಾಶ್ರೀ, ನಂದಿನಿ, ವಿನುತಾ, ಮಾನಸ, ನಯನ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧಮ್ಮ, ಐನಾ ಸಂಸ್ಥೆಯ ಸೆಲ್ವಾ ಮೇರಿ ದೊರೈ, ವೆರೋನಿಕಾ, ಜಯಶ್ರೀ, ಶಶಿಕಲಾ, ಮಂಜುಳಾ, ರೇಷ್ಮಾ, ಗಾಯತ್ರಿ. ಲಕ್ಕೀನಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.