ರೇಷ್ಮೆ ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆಗೆ ಪರಿಹಾರವಾಗಿ ‘ರೀಪರ್’ ಯತ್ರವನ್ನು ತಾಲ್ಲೂಕಿನ ಭಕ್ತರಹಳ್ಳಿ ಮತ್ತು ಶೀಗೇಹಳ್ಳಿಗಳಲ್ಲಿನ ಹಿಪ್ಪುನೇರಳೆ ತೋಟಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದೇವೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸಮಯ, ಹಣದ ಉಳಿಯತಾಯ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಯಲಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ತಾಲ್ಲೂಕಿನ ಶೀಗೇಹಳ್ಳಿಯಲ್ಲಿ ಸೋಮವಾರ ಕೇರಳ ಸರ್ಕಾರದ ಕ್ಯಾಂಪ್ಕೋ ತಯಾರಿಕೆಯ ರೀಪರ್ ಯಂತ್ರವನ್ನು ವಿವಿಧ ರೇಷ್ಮೆ ಬೆಳೆಗಾರರು ಹಾಗೂ ಅಧಿಕಾರಿಗಳೊಂದಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಅವರು ಮಾತನಾಡಿದರು.
ಈ ರೀಪರ್ ಯಂತ್ರವನ್ನು ಕೇರಳ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಅಲ್ಲಿ ಈ ಯಂತ್ರವನ್ನು ಗೋದಿ, ರಾಗಿ, ಭತ್ತ, ಜೋಳ, ಸೋಯಾ ಬೆಳೆ ಕತ್ತರಿಸಲು ಬಳಕೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ಗೇರಳ್ಳಿಯಲ್ಲಿ ಭತ್ತ ಮತ್ತು ಸಾದಲಿ ಸುತ್ತಮುತ್ತ ರಾಗಿ ಕಟಾವಿಗೆ ಬಳಸುತ್ತಿದ್ದಾರೆ. ಇದನ್ನು ಕೊಂಚ ಮಾರ್ಪಾಟು ಮಾಡಿದಲ್ಲಿ ನಮ್ಮ ರೇಷ್ಮೆ ಬೆಳೆಗಾರರ ಬಹುತೇಕ ಶ್ರಮ ಕಡಿಮೆಯಾಗುತ್ತದೆ. ಇಪ್ಪತ್ತು ಮಂದಿ ಮಾಡಬೇಕಾದ ಕೆಲಸವನ್ನು ಒಬ್ಬ ವ್ಯಕ್ತಿ ಈ ಯಂತ್ರವನ್ನು ಬಳಸಿ ಮಾಡಬಹುದು. ನಾಲ್ಕನೇ ಜ್ವರದ ರೇಷ್ಮೆ ಹುಳುವಿಗೆ ಹಾಕಲು ಹಿಪ್ಪುನೇರಳೆ ಸೊಪ್ಪಿನ ದಪ್ಪಕಡ್ಡಿಗಳನ್ನು ಕತ್ತರಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಅಲ್ಲದೆ ಕೂಲಿ ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿರುವ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಇದು ವರದಾನವಾಗಲಿದೆ ಎಂದರು.
ಒಂದು ಲಕ್ಷ 22 ಸಾವಿರ ರೂಗಳ ಈ ಯಂತ್ರಕ್ಕೆ ಈಗ ಕೃಷಿ ಇಲಾಖೆಯಿಂದ 48,500 ರೂಗಳ ಸಹಾಯಧನ ಸಿಗುತ್ತಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಹಾಗೂ ಮಂತ್ರಿಗಳನ್ನು ಭೇಟಿಯಾಗಿದ್ದು ಶೇ.90 ರಷ್ಟು ಸಹಾಯಧನಕ್ಕಾಗಿ ಒತ್ತಾಯಿಸಿದ್ದೇವೆ. ಸಿಗುವ ಆಶಾಭಾವನೆಯಿದೆ ಎಂದು ಅವರು ಹೇಳಿದರು.
ರೀಪರ್ ಯಂತ್ರಗಳ ಜಿಲ್ಲಾ ವಿತರಕರಾದ ಪ್ರಭಾಕರ ರೆಡ್ಡಿ ಮತ್ತು ಅಜಯ್ ರೆಡ್ಡಿ ಮಾತನಾಡಿ, ‘ರೇಷ್ಮೆ ಬೆಳೆಗಾರರು ಈ ಯಂತ್ರದಲ್ಲಿ ಕೆಲವು ಮಾರ್ಪಾಡುಗಳ ಅಗತ್ಯತೆಯನ್ನು ತಿಳಿಸಿದ್ದಾರೆ. ಅದನ್ನು ಒಂದು ವಾರದೊಳಗೆ ಮಾಡಿಕೊಡಲಾಗುವುದು. ಸುಲಭವಾಗಿ ಬಳಸಬಹುದಾದ ಈ ಯಂತ್ರವನ್ನು ಹಿಪ್ಪುನೇರಳೆ ಕಟಾವಿಗಲ್ಲದೆ, ರಾಗಿ, ಜೋಳವನ್ನು ಕತ್ತರಿಸಲೂ ಬಳಕೆ ಮಾಡಿಕೊಳ್ಳಬಹುದು. ತಂತ್ರಜ್ಞಾನದ ಬಳಕೆ ಈಗಿನ ಅವಶ್ಯಕತೆಯಾಗಿದೆ ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ಭಾಸ್ಕರ್, ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮಳ್ಳೂರು ಹರೀಶ್, ಕಿಶೋರ್, ನಾರಾಯಣಸ್ವಾಮಿ, ಪುಟ್ಟಮೂರ್ತಿ, ಎಸ್.ಎಂ.ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -