‘ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು, ಚೆನ್ನೆಂದು ದೊಡ್ಡವರ ಅನುಕರಿಸ ಬೇಡ’ ಎಂದು ಹೇಳಿದ ವೈಶಿಷ್ಟ್ಯಪೂರ್ಣ ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯವನ್ನು ಓದುವ ಮೂಲಕ ಅವರನ್ನು ಸ್ಮರಿಸೋಣ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ನಮ್ಮನ್ನಗಲಿದ್ದು 1980 ರ ಡಿಸೆಂಬರ್ 7ರಂದು. ಈ ತಿಂಗಳ ಸಾಹಿತಿಯಾಗಿ ಅವರನ್ನು ನೆನಪಿಸಿಕೊಳ್ಳುವುದು, ಅವರ ಸಾಹಿತ್ಯ ಓದಿ ಚರ್ಚಿಸುವುದು ಕಸಾಪ ತಾಲ್ಲೂಕು ಘಟಕದ ಉದ್ದೇಶವಾಗಿದೆ.
ಶಂ.ಬಾ. ಜೋಶಿ ಯವರು ಬೀಚಿಯವರನ್ನು ‘ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ’ ಎಂದು ವರ್ಣಿಸಿದ್ದಾರೆ. ಬೀಚಿ ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಭಾಷಾಭಿಮಾನ ಮೂಡುವಂತಾಗಬಾರದು. ನಾವು ನಿತ್ಯ ಕನ್ನಡಿಗರಾಗಬೇಕು, ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು. ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು ಎಂದು ಹೇಳಿದರು.
ವಿವಿಧ ಪ್ರತಿಭಾ ಪ್ರದರ್ಶನವನ್ನು ನೀಡಿದ ವಿದ್ಯಾರ್ಥಿಗಳಾದ ರಂಜನ್, ಮಾಣಿಕ್ಯ, ಲಕ್ಷ್ಮಿ, ತಿಲಕ್, ಕಿಶೋರ್‌ಕುಮಾರ್, ಮೋಹಿತ್, ಮಹೇಶ್ ಅವರಿಗೆ ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡ ಗೀತೆಗಳನ್ನು ಹಾಡಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ವೆಂಕಟರತ್ನಮ್ಮ, ಭಾರತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -