ಈಕೆಗೆ ಎರಡು ಕಾಲುಗಳು ಮತ್ತು ಒಂದು ಕೈ ಸ್ವಾಧೀನದಲ್ಲಿಲ್ಲ. ಸರಿಯಿರುವ ಒಂದು ಕೈಯಿನ ಬೆರಳುಗಳೂ ಸರಿಯಾಗಿಲ್ಲ. ಆದರೂ ಆತ್ಮಾಭಿಮಾನ ಈಕೆಯನ್ನು ದುಡಿಯಲು ಹಚ್ಚಿದೆ. ಸ್ವಾಭಿಮಾನದ ಬದುಕಿಗಾಗಿ ಇವರು ಚಿಲ್ಲರೆ ಅಂಗಡಿಯನ್ನು ನಡೆಸುತ್ತಾರೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ರೂಪ ಅಂಗವಿಕಲೆಯಾದರೂ ದುಡಿದು ಬದುಕುವ ಛಲದಿಂದ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಪ್ರತಿನಿತ್ಯ ಕಾಫಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುತ್ತಾರೆ. ತನ್ನ ತಾಯಿ ಮತ್ತು ಎರಡನೇ ತರಗತಿಯಲ್ಲಿರುವ ಪುಟ್ಟ ಮಗನ ಆಸರೆಯಿಂದ ಜೀವನಕ್ಕಾಗಿ ಒಂಟಿ ಕೈಯಿನಿಂದಲೇ ಹೋರಾಡುತ್ತಿದ್ದಾರೆ.
ಪ್ರತಿನಿತ್ಯ ತನ್ನ ತ್ರಿಚಕ್ರ ವಾಹನದಲ್ಲಿ ಚಕ್ಕುಲಿ, ಕೋಡುಬಳೆ, ಬಿಸ್ಕತ್ ಮುಂತಾದ ತಿಂಡಿಗಳು ಮತ್ತು ಕಾಫಿ ಟೀಗಳ ಫ್ಲಾಸ್ಕ್ ನೊಂದಿಗೆ ಚೌಡಸಂದ್ರ ಗೇಟಿಗೆ ಆಗಮಿಸುತ್ತಾರೆ. ತನ್ನ ತಾಯಿ ಅಥವಾ ಗ್ರಾಮಸ್ಥರ ಸಹಾಯ ಪಡೆದು ತಿಂಡಿಗಳ ಬಾಟಲಿಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಬರುವ ಗಿರಾಕಿಗಳಿಗೆ ತಿಂಡಿ ತೆಗೆದುಕೊಡಲೂ ಇವರ ಕೈಲಿ ಆಗದು. ಅವರೇ ತೆಗೆದುಕೊಂಡು ಇವರಿಗೆ ಹಣ ನೀಡಿ ಹೋಗಬೇಕು.
‘ನನ್ನದು ದುರಂತ ಕಥೆ. ಮೂರು ವರ್ಷದ ಮಗುವಾಗಿದ್ದಾಗ ಜ್ವರ ಬಂದಿತ್ತಂತೆ. ಆಗ ನನ್ನ ಕಾಲುಗಳು ಮತ್ತು ಒಂದು ಕೈ ಸ್ವಾಧೀನ ಕಳೆದುಕೊಂಡಿತಂತೆ. ಇರುವ ಒಂದು ಕೈಯಿನ ಬೆರಳುಗಳು ಕೊಂಚ ತಿರುಚಿವೆ. ಚೌಡಸಂದ್ರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಓದಿರುವೆ. ಮುಂದೆ ಓದಲು ಮೇಲೂರಿಗೆ ಹೋಗಲಾಗದೇ ಮನೆಯಲ್ಲೇ ಉಳಿದೆ. ನನ್ನ ತಾಯಿ ನಮ್ಮ ಸಂಬಂಧಿಕರಲ್ಲೇ ನನ್ನನ್ನು ಮದುವೆ ಮಾಡಿಕೊಟ್ಟರು. ಅವರಿಗೆ ನಾನು ಎರಡನೇ ಹೆಂಡತಿ. ಆದರೆ ಮಗುವಾದ ಮೇಲೆ ನನ್ನನ್ನು ತಾಯಿ ಮನೆಗೆ ಕಳುಹಿಸಿಬಿಟ್ಟರು. ನನ್ನ ತಾಯಿಗೆ ಹೊರೆಯಾಗಬಾರದೆಂದು ಕಷ್ಟಪಟ್ಟು ದುಡಿಯಲು ಯತ್ನಿಸುತ್ತಿರುವೆ’ ಎನ್ನುತ್ತಾರೆ ಚೌಡಸಂದ್ರದ ರೂಪ.
ಚೌಡಸಂದ್ರದ ರೂಪಾ ಅವರ ಮೊಬೈಲ್ ಸಂಖ್ಯೆ ೯೫೩೫೧೪೫೧೩೪.