ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಸಾಕ್ಷರತಾ ಸಪ್ತಾಹದ ಸಮಾರೋಪ, ಎಂಜಿನಿಯರ್ ದಿನ ಮತ್ತು ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮವನ್ನು ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಾಕ್ಷರ ಭಾರತ್ ಮುಖ್ಯ ತರಬೇತುದಾರ ಜೆ.ಬಿ.ಅಶೋಕ್, ಗುಲಾಮಗಿರಿ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಹೋಗಲಾಡಿಸಲು ಸಾಕ್ಷರತೆಯೊಂದು ಉತ್ತಮ ಸಾಧನ ಎಂದು ವಿವರಿಸಿದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಓಜೋನ್ ಪದರದ ರಕ್ಷಣೆಯು ಎಲ್ಲರ ಕರ್ತವ್ಯವಾಗಿದ್ದು, ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಾಗಬೇಕಿದೆ. ವಾತಾವರಣಕ್ಕೆ ಹಾನಿಯುಂಟುಮಾಡುವ ರಾಸಾಯನಿಕಗಳ ಬಳಕೆಯನ್ನು ಕನಿಷ್ಟಗೊಳಿಸಿ, ಹಸಿರುಕ್ರಾಂತಿಯಾಗಬೇಕಿದೆ ಎಂದು ವಿವರಿಸಿದರು.
ಶಿಕ್ಷಕ ಎ.ಬಿ.ನಾಗರಾಜು ಅವರು ಸರ್.ಎಂ.ವಿಶ್ವೇಶ್ವರಯ್ಯ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕಲ್ಲದೇ ಶಿಕ್ಷಣ, ಕೈಗಾರಿಕೆ, ಹಣಕಾಸು, ನೀರಾವರಿ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳು ಅವರ ದೂರದರ್ಶಿತ್ವವನ್ನು ಹೇಳುತ್ತವೆ ಎಂದರು.
ಶಿಕ್ಷಕಿ ಕೆ.ಎಲ್.ಅನಿತ ಅವರು ವಿಶ್ವ ಸಾಕ್ಷರತೆಯ ಕುರಿತು ಮಾತನಾಡಿ, ಸ್ವಾತಂತ್ರ್ಯಾಪೂರ್ವದಿಂದಲೂ ಸಾಕ್ಷರತೆಯನ್ನು ಸಾಧಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ಪ್ರತಿಶತ ಸಾಧನೆಯು ಮರೀಚಿಕೆಯೇ ಆಗಿದೆ. ಸಾಕ್ಷರತೆ ಸಾಧಿಸುವ ಯೋಜನೆಗಳ ಅನುಷ್ಟಾನ ಪ್ರಾಮಾಣಿಕವಾಗಿ ಆಗಬೇಕಿದ್ದು, ಅಕ್ಷರಜ್ಞಾನ ಪಡೆಯುವ ಬಗೆಗಿನ ಅರಿವು ಎಲ್ಲರಲ್ಲಿ ಬರಬೇಕಿದೆ ಎಂದರು.
ವಿದ್ಯಾರ್ಥಿಗಳಿಂದ ಸಾಕ್ಷರತೆ ಕುರಿತ ಕಿರುರೂಪಕ ಪ್ರದರ್ಶನ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಸದಸ್ಯ ಎನ್.ಪಿ.ನಾಗರಾಜಪ್ಪ, ಗ್ರಾಮಸ್ಥ ಮುನಿಕೃಷ್ಣಪ್ಪ, ಶಿಕ್ಷಕಿ ತಾಜೂನ್, ಎಂ.ವೈ.ಲಕ್ಷ್ಮಯ್ಯ ಹಾಜರಿದ್ದರು.