ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ಭರವಸೆ ನೀಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಎಸ್.ಸಿ.ಪಿ. ಯೋಜನೆಯಡಿಯಲ್ಲಿ ಸುಮಾರು ೭.೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಸಿ.ಸಿ.ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆಗಳನ್ನು ನೆರವೇರಿಸಲಾಗಿದ್ದು, ಎಲ್ಲಾ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಇದೇ ರೀತಿಯ ಕಾಮಗಾರಿಗಳನ್ನು ಮಾಡುವ ಮೂಲಕ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳ ಸವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು, ನಾಗರಿಕರೂ ಕೂಡಾ ತಮ್ಮ ತಮ್ಮ ಗ್ರಾಮಗಳಲ್ಲಿ ಮಾಡುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು, ಗುಣಮಟ್ಟದಲ್ಲಿ ರಾಜಿಯಾಗಬಾರದು, ಯಾವುದೇ ಸಂದರ್ಭದಲ್ಲಿ ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದ್ದರೆ ತಕ್ಷಣ ಅಂತಹ ಕಾಮಗಾರಿಯನ್ನು ಸ್ಥಗಿತಗೊಳಿಸಿ ನನ್ನ ಗಮನಕ್ಕೆ ತರಬೇಕು, ಸ್ಥಳೀಯ ಮುಖಂಡರುಗಳು ಸರ್ಕಾರದಿಂದ ಬಿಡುಗಡೆಯಾಗಿರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಗಳಾಗುವಂತೆ ನೋಡಿಕೊಳ್ಳಬೇಕು ಎಂದರು.
ನರಸಿಂಹಮೂರ್ತಿ, ರವಿ, ಮಳ್ಳೂರಯ್ಯ, ಡಿ. ಕೃಷ್ಣಪ್ಪ, ಗುತ್ತಿಗೆದಾರ ಅಪ್ಪೇಗೌಡನಹಳ್ಳಿ ಮಂಜುನಾಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.