ನಗರದ ೭, ೮, ಮತ್ತು ೯ ನೇ ವಾರ್ಡುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ನಗರಸಭಾ ಆಯುಕ್ತರಿಗೆ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ಸಿದ್ದಾರ್ಥನಗರದ ವಾರ್ಡುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ರಸ್ತೆಗಳು ಹದಗೆಟ್ಟಿವೆ, ಸ್ವಚ್ಚತೆ ಇಲ್ಲ, ಚರಂಡಿಗಳಲ್ಲಿ ಸ್ವಚ್ಚ ಮಾಡದೆ ಇರುವುದರಿಂದ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಈ ವಾರ್ಡುಗಳಲ್ಲಿನ ಜನರು ಪದೇ ಪದೇ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದು, ಸಂಪಾದನೆ ಮಾಡುವಂತಹ ಹಣವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗಿದೆ. ಈ ಬಗ್ಗೆ ಅನೇಕ ಬಾರಿಗೆ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ, ಆದ್ದರಿಂದ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ನೆನೆಗುದಿಗೆ ಬಿದ್ದಿರುವ ಚರಂಡಿಯ ಮೇಲ್ವಾವಣಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿಪತ್ರವನ್ನು ಸ್ವೀಕರಿಸಿ ಮಾತನಾಡಿದ ಆಯುಕ್ತ ಹರೀಶ್, ಮಂಗಳವಾರದಂದು ಸಾಮಾನ್ಯಸಭೆಯನ್ನು ಕರೆಯಲಾಗಿದ್ದು, ಸಭೆ ಮುಕ್ತಾಯವಾದ ಕೂಡಲೇ ವಾರ್ಡುಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಎಂ.ನಾಗರಾಜ್, ಉಪಾಧ್ಯಕ್ಷ ಕೆ.ಮುನಿರಾಜು, ಕಾರ್ಯದರ್ಶಿ ಸುಭ್ರಮಣಿ, ಖಜಾಂಚಿ ಎನ್.ವೆಂಕಟರಾಜು, ಸುಂದರರಾಜು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -