ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಮಾತನಾಡಿದರು.
ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಬಹು ಮುಖ್ಯ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಅವರು ತಿಳಿಸಿದರು.
ಮನುಷ್ಯನ ದೇಹಕ್ಕೆ ಹೇಗೆ ಜ್ವರ ನೆಗಡಿ ಮುಂತಾದ ರೋಗಗಳು ಕಾಡಿಸುತ್ತವೆ. ಅದೇ ರೀತಿ ಮನುಷ್ಯನ ಮೆದುಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಎಚ್ಚರ ವಹಿಸಿ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಬೇಕು ಎಂದು ಹೇಳಿದರು. ಹಿಂದೆ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸುತ್ತಿರಲ್ಲಿಲ್ಲ. ಮೂಢನಂಬಿಕೆಯಿಂದ ಪೂಜೆ, ಹೋಮಗಳ ಮೊರೆ ಹೋಗುತ್ತಿದ್ದರು. ಯಾವುದೇ ವ್ಯಕ್ತಿ ಶೇಕಡಾ ನೂರರಷ್ಟು ಮಾನಸಿಕ ಆರೋಗ್ಯ ಹೊಂದಿರುವುದಿಲ್ಲ . ಆದ್ದರಿಂದ ತಪಾಸಣೆ ಅಗತ್ಯ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಇಂದು ನಾವೆಲ್ಲರೂ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಮಾನಸಿಕ ಸ್ಥಿತಿಯಲ್ಲಿ ಏರುಪೇರು ಆಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಉದಾಹರಿಸಿ ತಿಳಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಯೋಗ, ಪ್ರಾಣಾಯಾಮ ಮಾಡುವುದರ ಮೂಲಕ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಬೇಕು. ಒತ್ತಡದ ಬದುಕು ಪ್ರತಿಯೊಬ್ಬರಿಗೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದೆ. ಶಿಸ್ತು, ಸಂಯಮದಲ್ಲಿ ಜೀವನ ಸಾಗಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಆಶಾಕಾರ್ಯಕರ್ತೆಯರು ಮನೆಮನೆ ಭೇಟಿ ನೀಡುವಾಗ ಮಾನಸಿಕ ಅಸ್ವಸ್ಥತೆ ಅಥವಾ ಒತ್ತಡದಲ್ಲಿರುವವರು ಕಂಡಾಗ ಅವರಿಗೆ ಮನವೊಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ್ ಬರೆದಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವಿತರಿಸಲಾಯಿತು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲ ಮಂಜುನಾಥ್, ನಾಗೇಂದ್ರಬಾಬು, ಮುನಿರಾಜು, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಡಾ.ವಿಜಯ್ ಕುಮಾರ್ ಹಾಜರಿದ್ದರು.