ಶಾಲೆ, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಮತ್ತು ಸಮುದಾಯದ ಸಾಂಘಿಕ ಪ್ರಯತ್ನದಿಂದಾಗಿ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂರು ಸಸಿಗಳನ್ನು ನೆಡುವ ಕೆಲಸ ಶನಿವಾರ ನಡೆದಿದೆ.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದ್ದು, ಇತ್ತೀಚೆಗಷ್ಟೆ ಸರ್ಕಾರಿ ಹಣ ಮತ್ತು ಗ್ರಾಮಸ್ಥರ ನೆರವಿನಿಂದ ಕಾಂಪೋಂಡ್ ನಿರ್ಮಿಸಲಾಗಿತ್ತು. ‘ವಿಷನ್ ಗ್ರೀನ್’ ಎಂಬ ಸಂಘವನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶವನ್ನು ಹೊಂದಿರುವ ಒಂದು ತಂಡ ಹಾಲು ಸಕ್ಕರೆ ಬೆರೆತಂತೆ ಶಾಲೆಯೊಂದಿಗೆ ಸೇರಿಕೊಂಡು ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದೆ.
ಚಿಂತಾಮಣಿಯಲ್ಲಿ ಪಿಯುಸಿ ಓದುವಾಗ ಜೊತೆಗಾರರಾಗಿದ್ದವರು ಈಗ ಬೇರೆ ಬೇರೆ ನಗರಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಸುಮಾರು 20 ಮಂದಿಯ ಯುವ ತಂಡವು ತಮ್ಮ ಬೇರನ್ನು ಚಿಗುರಿಸುವ ಕನಸಿನಿಂದ ‘ವಿಷನ್ ಗ್ರೀನ್’ ಎಂಬ ಸಂಘ ಮಾಡಿಕೊಂಡಿದ್ದಾರೆ. ಜಿಲ್ಲೆಯ ಜ್ವಲಂತ ನೀರಿನ ಸಮಸ್ಯೆ ನಿವಾರಣೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ, ಮಹಾಗನಿ, ಬಸವನಪಾದ, ಮಾವು, ಗಸಗಸೆ, ಅರಳಿ, ಕಾಡುಬಾದಾಮಿ, ಅತ್ತಿ, ನುಗ್ಗೆ ಮುಂತಾದ ಸ್ಥಳೀಯ ಗಿಡಗಳನ್ನು ನೆಡಲಾಯಿತು.
‘ನಾವು ಸುಮಾರು 20 ಮಂದಿ ಸ್ನೇಹಿತರು ಮೂರು ತಿಂಗಳಿಗೊಮ್ಮೆ ಸೇರುತ್ತೇವೆ. ನಮ್ಮಿಂದ ನಮ್ಮ ಜಿಲ್ಲೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟು ಬೆಳೆಸಲು ಮುಂದಾದೆವು. ಆದರೆ ನಾವು ನೆಟ್ಟು ಹೋದ ಮೇಲೆ ಅದನ್ನು ಪೋಷಿಸಿ ಪೊರೆಯುವ ಜನರ ಅಗತ್ಯವಿದೆ. ನಾವು ಆ ರೀತಿಯ ಸ್ಥಳವನ್ನು ಹುಡುಕುವಾಗ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಎಚ್.ವಿ. ವೆಂಕಟರೆಡ್ಡಿ ಅವರ ಪರಿಚಯವಾಯಿತು. ಅವರ ಶಾಲೆಯ ಎರಡು ಎಕರೆ ಸ್ಥಳವಿದ್ದು, ಈಚೆಗಷ್ಟೆ ಕಾಂಪೋಂಡ್ ನಿರ್ಮಿಸಿದ್ದಾರೆ. ಅಲ್ಲಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡುವಂಥಹವರು. ಹೀಗಾಗಿ ನಮ್ಮ ಚೊಚ್ಚಲ ಪರಿಸರ ಪ್ರಯತ್ನಕ್ಕೆ ಈ ಶಾಲೆಯನ್ನು ಆರಿಸಿಕೊಂಡೆವು. ಶಿಕ್ಷಕರು ಸ್ಥಳೀಯ ಗಿಡಗಳಿಗೆ ಪ್ರಾತಿನಿದ್ಯ ನೀಡಬೇಕು ಎಂದು ಹೇಳಿ ಅರಣ್ಯ ಇಲಾಖೆಯ ನರ್ಸರಿಯಿಂದ ಗಿಡಗಳನ್ನು ತಂದರು. ನಾವು ಗುಂಡಿಗಳನ್ನು ಜೆಸಿಬಿ ಮೂಲಕ ತೋಡಿಸಿಕೊಟ್ಟೆವು. ಶಾಲೆಯಲ್ಲಿ ನೀರಿನ ವ್ಯವಸ್ಥೆಯಿದೆ. ನೂರು ಗಿಡಗಳಿಗೆ ಮಕ್ಕಳು ನೀರು ಹಾಕುವುದು ಕಷ್ಟ ಮತ್ತು ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಹನಿನೀರಾವರಿಯನ್ನು ನಾವು ಮಾಡಿಸಿಕೊಡುತ್ತಿದ್ದೇವೆ. ಮೂರು ತಿಂಗಳಿಗೊಮ್ಮೆ ಬಂದು ಮಕ್ಕಳಿಗೆ ಆಡಿಯೋ ವೀಡಿಯೋ ಮೂಲಕ ಪರಿಸರ ಪಾಠ ಮಾಡಿ ಹೋಗುವ ಉದ್ದೇಶವಿದೆ’ ಎಂದು ಭರತ್ ಮತ್ತು ರಾಜೇಶ್ ತಿಳಿಸಿದರು.
‘ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಪಶುವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿ, ಶಿಕ್ಷಕರು ಮುಂತಾದ ವಿವಿಧ ರಂಗಗಳಲ್ಲಿ ಜೀವನ ಕಂಡುಕೊಂಡಿರುವ ಯುವಕರ ತಂಡವು ‘ವಿಷನ್ ಗ್ರೀನ್’ ಎಂಬ ಸಂಘದ ರೂಪದಲ್ಲಿ ನಮ್ಮಲ್ಲಿ ಬಂದರು. ಸ್ಥಳೀಯ ಗಿಡಗಳನ್ನು ನೆಡುವುದರಿಂದ ಮುಂದೆ ಗಿಡ ಬೆಳೆದಂತೆ ಹಕ್ಕಿ ಚಿಟ್ಟೆಗಳೂ ಬರುತ್ತವೆಂದು ಅವರ ಮನವೊಲಿಸಿದೆವು. ಗುಣಿ ತೋಡಲು ಮತ್ತು ಹನಿನೀರಾವರಿಗಾಗಿ ನೆರವು ನೀಡುವುದರೊಂದಿಗೆ ಖುದ್ದಾಗಿ ಮಕ್ಕಳೊಂದಿಗೆ ಸೇರಿ ಗಿಡಗಳನ್ನು ನೆಟ್ಟರು. ಗ್ರಾಮಸ್ಥರೂ ನೆರವಾದರು. ಮಕ್ಕಳಿಗೆ ‘ವಿಷನ್ ಗ್ರೀನ್’ ತಂಡದವರು ಪರಿಸರದ ಬಗ್ಗೆ ಆಡಿಯೋ ವೀಡಿಯೋ ಕ್ಲಿಪ್ಪಿಂಗ್ಸ್ ತೋರಿಸಿ ಸಂವಾದವನ್ನು ನಡೆಸಿ ಸಿಹಿ ಹಂಚಿದರು. ಶಾಲೆಗೆ ಗ್ಲೋಬ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಮೂರು ತಿಂಗಳಿಗೊಮ್ಮೆ ಬಂದು ಗಿಡಗಳನ್ನು ಗಮನಿಸಿ, ಮಕ್ಕಳಿಗೆ ಪರಿಸರ ವಿಷಯವಾಗಿ ಕ್ಲಿಪ್ಪಿಂಗ್ಸ್, ಸಾಕ್ಷ್ಯಚಿತ್ರಗಳನ್ನು ತೋರಿಸುವುದಾಗಿ ಹೇಳಿರುವರು’ ಎಂದು ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ತಿಳಿಸಿದರು.
‘ವಿಷನ್ ಗ್ರೀನ್’ ತಂಡದ ರಾಜೇಶ್, ಬಿ.ಭರತ್, ಬಿ.ಎಸ್.ಭರತ್, ವಿನಯ್, ವಿನೋದ್, ಶ್ರೀನಾಥ, ಶ್ರೀನಿವಾಸ, ರಘು, ಚೇತನ್, ಮದನ್, ಸ್ಮಿತಾ, ಸೋಮಶೇಖರ್, ಸಾಗರ್, ಮಹೇಶ್, ಸಂದೀಪ್, ತೇಜುಕೃಷ್ಣ, ಕಿರಣ್, ವೆಂಕಟರೆಡ್ಡಿ, ಮಂಜುನಾಥ, ಹರೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಗ್ರಾಮಸ್ಥರಾದ ಜಯರಾಮ್, ಕೇಶವ, ರಾಮಕೃಷ್ಣ, ದೇವರಾಜ್, ವೆಂಕಟರೆಡ್ಡಿ, ವಿನಯ್, ಶಿಕ್ಷಕರಾದ ನಾಗಭೂಷಣ್, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.