ಸರ್ಕಾರಿ ಶಾಲೆಗಳ ಬಗ್ಗೆ ಇರುವ ಅಸಡ್ಡೆ ಭಾವನೆ ಮನಸ್ಸಿನಿಂದ ದೂರ ಮಾಡಿ. ವಿದ್ಯಾರ್ಹತೆಯನ್ನು ಹೊಂದಿರುವ ತರಬೇತಿ ಪಡೆದಿರುವ ಶಿಕ್ಷಕರು ಇದ್ದಾರೆ. ಸರ್ಕಾರವೂ ಅಗತ್ಯವಾದ ಎಲ್ಲ ರೀತಿಯ ಕ್ರಮಗಳಿಗೂ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರೋತ್ಸಾಹದಾಯಕ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ಹಾಗೂ ಶೂ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ತಾತ್ಸಾರ ಮನೋಭಾವವನ್ನು ಬಿಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಅನುಭವಿ, ಅರ್ಹ ಶಿಕ್ಷಕರು ಇದ್ದು ಉತ್ತಮ ಪಾಠ ಪ್ರವಚನವನ್ನು ಮಾಡಲಿದ್ದಾರೆ. ಜತೆಗೆ ಸಮವಸ್ತ್ರ, ಸೈಕಲ್, ಪಠ್ಯ ಪುಸ್ತಕ ಇನ್ನಿತರೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳ ತೀವ್ರತರವಾದ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದು ಇನ್ನೂ ಸುಧಾರಿಸುವ ಅಗತ್ಯ ಇದೆ. ಅದಕ್ಕೆ ಅಗತ್ಯವಾದ ಎಲ್ಲ ಚಟುವಟಿಕೆಗಳನ್ನು ರೂಪಿಸಲಾಗಿದೆ. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ಪಂದಿಸಿ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಇನ್ನಷ್ಟು ಹೆಚ್ಚಿಸಲು ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಬಿಇಒ ಎಸ್.ರಘುನಾಥರೆಡ್ಡಿ ಮಾತನಾಡಿ, ಯಾವುದೆ ಖಾಸಗಿ ಶಾಲೆಯಲ್ಲೂ ಸಿಗದಂತ ಉತ್ತಮ ಶಿಕ್ಷಣ ಇನ್ನಿತರೆ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶವೂ ಉತ್ತಮಗೊಳ್ಳುತ್ತಿದೆ ಎಂದರು.
ಕಳೆದ ಹಲವು ವರ್ಷಗಳ ನಂತರ ಶಾಲಾ ಚಟುವಟಿಕೆಗಳು ಆರಂಭವಾಗುವುದಕ್ಕೂ ಮುನ್ನ ಶಾಲಾ ಮಕ್ಕಳ ಕೈಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ಇನ್ನಿತರೆ ಸವಲತ್ತುಗಳು ಕೈಗೆ ಸೇರುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು.
೨೦೧೫-೧೬ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯ ಜೆ.ಎಂ.ವೇಣು(೫೭೪- ಶೇ.೯೧.೪೮), ಆನೆಮಡಗು ಸರಕಾರಿ ಪ್ರೌಢಶಾಲೆಯ ಪಿ.ಎನ್.ಚೈತ್ರ(೫೬೮ – ಶೇ. ೯೦.೮೮) ಹಾಗೂ ಅದೇ ಶಾಲೆಯ ಎ.ಎಂ.ಚೈತ್ರ(೫೬೭- ಶೇ. ೯೦.೭೨) ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
೨೦೧೬-೧೭ನೇ ಸಾಲಿನಲ್ಲಿ ಕರ್ನಾಟಕ ದರ್ಶನ ಶಾಲಾ ಶೈಕ್ಷಣಿಕ ಪ್ರವಾಸದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗಗಳಲ್ಲಿ ಪ್ರಥಮ ಬಹುಮಾನವಾಗಿ ೧ ಸಾವಿರ, ೨ನೇ ಬಹುಮಾನವಾಗಿ ೭೫೦ ರೂ, ಹಾಗೂ ೩ನೇ ಬಹುಮಾನವಾಗಿ ೫೦೦ ರೂ ಮುಖಬೆಲೆಯ ಪುಸ್ತಕಗಳನ್ನು ವಿತರಿಸಲಾಯಿತು.
ಸಾಂಕೇತಿವಾಗಿ ಪಠ್ಯ ಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ, ಸೈಕಲ್, ಶೂ ಇನ್ನಿತರೆ ಎಲ್ಲ ಪರಿಕರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಮುಖಂಡ ಲಕ್ಷ್ಮೀನಾರಾಯಣ್(ಲಚ್ಚಿ), ವಿಷಯ ನಿರೀಕ್ಷಕರಾದ ಹುಸೇನ್ ಸಾಬ್, ಮುಖ್ಯ ಶಿಕ್ಷಕ ರವೀಂದ್ರ, ಪ್ರಭಾರಿ ಮುಖ್ಯ ಶಿಕ್ಷಕಿ ಮಂಜುಳ, ಶಿಕ್ಷಕರ ಸಂಘದ ಎಲ್.ವಿ.ವೆಂಕಟರೆಡ್ಡಿ, ಬೈರಾರೆಡ್ಡಿ, ಮಧುಸೂಧನ್ ಹಾಜರಿದ್ದರು.