ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಲ್ಲೂಕಿನ ಯಾವುದೇ ಸರ್ಕಾರಿ ನೌಕರರು ಭಾಗವಹಿಸಬಾರದೆಂದು ತೀರ್ಮಾನಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆ ಕಾರ್ಯಕ್ಕಾಗಿ ಸಿಬ್ಬಂದಿಯನ್ನು ನೇಮಿಸುವಲ್ಲಿ ಸರ್ಕಾರಿ ನೀತಿ ನಿಯಮಗಳನ್ನು ಗಾಳಿಗೆ ತೂರುವುದರೊಂದಿಗೆ ಚುನಾವಣೆ ಕಾರ್ಯಕ್ಕಾಗಿ ನೇಮಿಸಿರುವ ಸಿಬ್ಬಂದಿಗೆ ವಿನಾಕಾರಣ ಚುನಾವಣಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಕಾರ್ಯಕ್ಕಾಗಿ ನೇಮಿಸುವಾಗ ಗರಿಷ್ಠ ಮೂಲ ವೇತನದಾರರಿಗೆ ಪಿಆರ್ಓ ಆಗಿ ಕೆಳಹಂತದ ಅಧಿಕಾರಿಗಳಿಗೆ ಎಪಿಆರ್ಓ, ಪಿಓ ಆಗಿ ನೇಮಿಸಬೇಕು ಎನ್ನುವ ಆದೇಶವಿದ್ದರೂ ಸರ್ಕಾರಿ ಆದೇಶನ್ನು ಗಾಳಿಗೆ ತೂರಿ ಕೆಳಹಂತದ ನೌಕರರನ್ನು ಪಿಆರ್ಓ ಆಗಿ ಗರಿಷ್ಠ ವೇತನ ಪಡೆಯುವ ಹಾಗು ೨೦-–೩೦ ವರ್ಷ ಸರ್ಕಾರಿ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳನ್ನು ಪಿಓ ಆಗಿ ನೇಮಿಸಿರುತ್ತಾರೆ.
ಇನ್ನು ಗರ್ಬಿಣಿ ಸ್ತ್ರೀಯರು ಸೇರಿದಂತೆ ಬಾಣಂತಿಯರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಚುನಾವಣೆ ಕಾರ್ಯಕ್ಕೆ ನೇಮಿಸುವುದರೊಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ಅದೇ ತಾಲ್ಲೂಕಿನಲ್ಲಿ ನೇಮಕ ಮಾಡಬೇಕೆಂಬ ಆದೇಶವಿದ್ದರೂ ಉದ್ದೇಶಪೂರ್ವಕವಾಗಿ ಬೇರೆ ತಾಲ್ಲೂಕಿಗೆ ನೇಮಕ ಮಾಡಿರುವ ಚುನಾವಣೆಯ ಅಧಿಕಾರಿ ಹಾಗು ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿರನ್ನು ಈ ಬಗ್ಗೆ ಕೇಳಿದರೆ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ಮಾಡಿದ್ದಾರೆ. ಹಾಗಾಗಿ ಆದೇಶ ಮಾಡಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೌಖಿಕವಾಗಿ ಹೇಳಿರುತ್ತಾರೆ.
ತಮಗೆ ಬೇಕಾದ ಸಿಬ್ಬಂದಿಗೆ ಮಾತ್ರ ಅನುಕೂಲ ಮಾಡಿಕೊಡಲು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ ಅವರು ಕೋರಿದ ಕಡೆ ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ತಾಲ್ಲೂಕು ಚುನಾವಣಾಧಿಕಾರಿಗಳು ಸರ್ಕಾರಿ ನೌಕರರ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ಹಾಗಾಗಿ ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಸರ್ಕಾರಿ ನೌಕರರು ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಈಗಾಗಲೇ ಸಂಘ ತೀರ್ಮಾನಿಸಲಾಗಿದೆ ಎಂದಿದ್ದಾರೆ.
‘ಪ್ರತಿಯೊಬ್ಬ ಸರ್ಕಾರಿ ನೌಕರರು ಚುನಾವಣೆಯಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಯಾವುದೇ ಕೆಲಸವನ್ನು ಕೊಟ್ಟರೂ ಪ್ರತಿಯೊಬ್ಬರೂ ನಿಷ್ಟೆಯಿಂದ ಮಾಡಬೇಕು. ಅದು ಬಿಟ್ಟು ನಮಗೆ ಇಂತಹುದೇ ಹುದ್ದೆ ಬೇಕು ಎಂದರೆ ಹೇಗೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಆಕ್ಷೇಪಣೆಯೇನಾದರೂ ಇದ್ದಲ್ಲಿ ಲಿಖಿತವಾಗಿ ನೀಡಿದಲ್ಲಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡುವುದರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
- Advertisement -
- Advertisement -
- Advertisement -
- Advertisement -