ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಒತ್ತುವರಿಯಾಗಿರುವ ಸರ್ಕಾರಿ ಗುಂಡು ತೋಪನ್ನು ತಾಲ್ಲೂಕು ಆಡಳಿತದ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆಯಿತು.
ಜಪ್ತಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 3 ರಲ್ಲಿ 38 ಗುಂಟೆ, ಸರ್ವೆ ನಂಬರ್ 4 ರಲ್ಲಿ 7 ಎಕರೆ 32 ಗುಂಟೆ ಜಮೀನು ಸರ್ಕಾರಿ ಗುಂಡು ತೋಪಿದ್ದು, ಕೆಲ ಭಾಗ ಹಲವಾರು ವರ್ಷಗಳಿಂದ ಖಾಸಗಿಯರ ಅನುಭವದಲ್ಲಿತ್ತು. ಈ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ತಾಲ್ಲೂಕು ಆಡಳಿತದ ವತಿಯಿಂದ ಸರ್ವೆ ನಡೆಸಿದ್ದರು. ಗುಂಡುತೋಪಿನಲ್ಲಿ ಉಳುಮೆ ಮಾಡುತ್ತಿದ್ದವರಿಗೆ ನೋಟಿಸ್ ನೀಡಿದ್ದರು. ಶುಕ್ರವಾರ ಗುಂಡು ತೋಪಿನ ಸುತ್ತ ಜೆಸಿಬಿ ಮೂಲಕ ಕಾಲುವೆ ತೆಗೆಸುವ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಯಾವುದೇ ತಕರಾರಿಲ್ಲದೆ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಈ ಗುಂಡುತೋಪಿನ ಜಾಗದಲ್ಲಿ ಮೂರು ದೇವಾಲಯಗಳು, ಶಾಲಾ ಕಟ್ಟಡ ಹಾಗೂ ಆರು ಮನೆಗಳಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ದೇವಾಲಯ ಮತ್ತು ಶಾಲಾ ಕಟ್ಟಡವನ್ನು ತೆರವುಗೊಳಿಸುವುದಿಲ್ಲ. ಉಳಿದಂತೆ ಆರು ಮನೆಗಳನ್ನು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.
ರಜಸ್ವ ನಿರೀಕ್ಷಕ ಸುಬ್ರಮಣಿ, ರೆವಿನ್ಯೂ ಇಲಾಖೆಯ ಲಾರೆನ್ಸ್, ನಾಗರಾಜು, ಜಂಗಮಕೋಟೆ ಎ.ಎಸ್.ಐ ಈರಪ್ಪ, ಸನಾವುಲ್ಲಾ, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -